Monday, 4 January 2021

ರೈತರ ಆತ್ಮಹತ್ಯೆಗೆ ಕೊನೆಯೆಂದು..?

 ರೈತರ ಆತ್ಮಹತ್ಯೆಗೆ ಕೊನೆಯೆಂದು..?

ಮಾಡಿಲ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ರೈತರನ್ನು ನಾವು ನೋಡಿದ್ದೇವೆ ಇದು ಪ್ರಬುತ್ವಕ್ಕೆ ನಾಚಿಕೆಗೇಡಿನ ಸಂಗತಿ. ಯಾವುದೇ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಯಾವೊಬ್ಬ ರೈತನೂ ಆತ್ಮಹತ್ಮೆ ಮಾಡಿಕೊಳ್ಳ ಬಾರದು. ರೈತ ತನಗಾಗಿ ಮಾತ್ರ ಉಳುಮೆ ಮಾಡಿ ಅನ್ನ ನೀಡುವುದಿಲ್ಲ ಇಡಿ ದೇಶಕ್ಕೆ ಅನ್ನ ನೀಡುತ್ತಾನೆ. ಇಂತ ರೈತ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಏನರ್ಥ..?
ನಿನ್ನೆಯ ವಾರ್ತಾ ಭಾರತಿ ದಿನ ಪತ್ರಿಕೆಯನ್ನು ಕೈಗೆತ್ತಿಕೊಂಡಾಕ್ಷಣ ಮುಖ ಪುಟದ ದಪ್ಪಕ್ಷರದಲ್ಲಿ ಬರೆದ ಹೆಡ್ ಲೈನ್ ನನಗೆ ತುಂಬಾ ಬೇಸರ ತರಿಸಿತು ಒಂದು ಕ್ಷಣ ಯೋಚಿಸಿದೆ. ಪ್ರಜಾ ಪ್ರಭುತ್ವ ಎಂದರೆ ಇದೆನಾ... ಯಾವುದೇ ಒಂದು ಕಾಯಿದೆ ಅಥವಾ ಕಾನೂನು ಸರ್ಕಾರ ಜಾರಿಗೊಳಿಸುತಿದೆ ಎಂದರೆ ಅದರಿಂದ ಪ್ರಜೆಗಳಿಗೆ ಏನಾದ್ರೂ ಉಪಯುಕ್ತವಾಗ ಬೇಕು.. ಅದನ್ನು ಕುರಿತು ಜನರಲ್ಲಿ ಅರಿವು ಮೂಡಿಸಿ ಜಾರಿಗೆ ತರುವುದು ಪ್ರಜಾ ಪ್ರಭುತ್ವದ ಲಕ್ಷಣ.. ಒಂದು ವೇಳೆ ಸರ್ಕಾರ ಮಾಡುವ ಕಾನೂನನ್ನು ಜನತೆ ವಿರೋಧಿಸಿದರೆ ಅದನ್ನು ಕೋಡಲೇ ಕೈ ಬಿಡಬೇಕು ಈ ರೀತಿ ಮಾಡಿದಲ್ಲಿ ಪ್ರಜಾ ಪ್ರಭುತ್ವದ ಮೌಲ್ಯಗಳು ಉಳಿಯಲಿಕ್ಕೆ ಸಾಧ್ಯ..
ತಿಂಗಳುಗಟ್ಟಲೇ ರೈತ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡುತಿದ್ದರೂ ಸರ್ಕಾರ ರೈತರ ಕೂಗನ್ನು ಧಿಕ್ಕರಿಸುತ್ತಲೇ ಇದೆ... ಸಮಾಧಾನಕ್ಕಾಗಿ

ಪದೇ ಪದೇ ಸಂಧಾನಕ್ಕೆAದು ಕರೆಯುವುದು ನಾಟಕೀಯ ರೀತಿಯಾಗಿದೆ. ದಪ್ಪ ಚರ್ಮ ಹೊಂದಿದ ಬಂಡು ರಾಜಕಾರಣವನ್ನು ಸಹಿಸದೇ ರೈತ ದೆಹಲಿ ಹೋರಾಟದಲ್ಲಿ ಪಾಲ್ಗೊಂಡ  ರೈತರ ಬಾಪೂ ಎಂದೇ ಜನಪ್ರಿಯರಾಗಿದ್ದ ಕಶ್ಮೀರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವುದು ಶೋಚನೀಯ.  ಇವರ ಸಾವು ರೈತ ಹೋರಾಟಕ್ಕೆ ಇನ್ನಷ್ಟು  ಕಿಚ್ಚು ಹಚ್ಚುವಂಥದ್ದು, ದೇಶದ ರೈತರ ಹಿತಕ್ಕಾಗಿ ಪ್ರಾಣ ಅರ್ಪಿಸಿದ ಇವರಿಗೆ ಭಾವಪೂರ್ವಕ ನಮನಗಳು ಮನುಷ್ಯತ್ವ ಮರೆತು ರಾಜಕೀಯ ಮಾಡುವ ರಾಜಕಾರಣಿಗಳಿಗೆ ಧಿಕ್ಕಾರ...ಕಶ್ಮೀರ್ ಸಿಂಗ್ ಅವರ ಸಾವಿಗೆ ನೀವು ಏನು ನ್ಯಾಯ ಕೊಡುತ್ತೀರೀ..? ಹೆಚ್ಚೆಂದರೆ ಅವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಕೊಟ್ಟು ಬೇಷ್ ಅನಿಸಿಕೊಳ್ಳಲು ಅವರ ಊರಿನಲ್ಲಿ ಒಂದು ಮೂರ್ತಿಯನ್ನ ಮಾಡಬಹುದು ಅದು ಬಿಟ್ಟರೇ ನಿಮ್ಮ ಕೈಯಲ್ಲಿ ಏನನ್ನು ಮಾಡಲಾಗುವುದಿಲ್ಲ...

       ನಾವು ಎಷ್ಟು ದಿನಗಳವರೆಗೆ ಈ ಚಳಿಯಲ್ಲಿ ಕುಳಿತು ಕೊಳ್ಳಬೇಕು..? ಈ ಸರ್ಕಾರ ನಮ್ಮ ಅಹವಾಲನ್ನು ಎಂದಿಗೂ ಆಲಿಸದೂ. ಸಮಸ್ಯೆಗೆ ಏನಾದರೂ  ಪರಿಹಾರ ದೊರೆಯ ಬಹುದು ಎನ್ನುವ ಉದ್ದೇಶದಿಂದ ನಾನು ಪ್ರಾಣ ತ್ಯಾಗ ಮಾಡುತಿದ್ದೇನೆ.  
ಕಶ್ಮೀರ್ ಸಿಂಗ್ ಅವರ ಡೆತ್ ನೋಟ್ ನಲ್ಲಿ ಬರೆದ ಉದ್ದೇಶವನ್ನು ಅರಿತು ನೀವು ಕೂಡಲೇ..ರೈತ ವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಿ ... ಕೊನೆ ಪಕ್ಷದಲ್ಲಿ ಹುತಾತ್ಮ ರೈತನಿಗೆ ನೀವು ಸಲ್ಲಿಸುವ ಶ್ರದ್ಧಾಂಜಲಿ ಎಂತಾದರೂ ಸರಿಯೇ ಇನ್ನಷ್ಟು ರೈತರನ್ನು ಬಲಿ ತೆಗೆದುಕೊಳ್ಳಬೇಡಿ..;

                                             ಮಾಳಿಂಗರಾಯ.ಕೆAಭಾವಿ

Tuesday, 13 October 2020

ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಬಾಬಾಸಾಹೇಬ್ ಅಂಬೇಡ್ಕರರ ಆಕ್ರೋಶದ ಮಾತು ಹೇಗಿತ್ತೆಂದರೆ* ..!?


1947 ಜನವರಿ ತಿಂಗಳ ಒಂದು ದಿನ “ಸಂವಿಧಾನ ಸಭೆ” (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು.


ಯಥಾಪ್ರಕಾರ ಸಂವಿಧಾನ ಸಭೆಯ “ಅಲ್ಪಸಂಖ್ಯಾತರ ಉಪಸಮಿತಿ”ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ.


ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ “ಅಲ್ಪಸಂಖ್ಯಾತರ ಉಪಸಮಿತಿ” ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ “ಹಿಂದೂಸ್ತಾನ್ ಟೈಮ್ಸ್” ಮತ್ತು “ಸ್ಟೇಟ್ಸ್ ಮನ್” ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ ಕೆಂಪಕ್ಷರಗಳಲ್ಲಿ ಬರೆದಿಡುವ ದಿನ) ಎಂದು!! ಅಂದರೆ ಮೀಸಲಾತಿ ರದ್ದುಗೊಳಿಸಿದ್ದು ಇವರಿಗೆ “ರೆಡ್ ಲೆಟರ್ ಡೇ”!


ಈ ಹಿನ್ನೆಲೆಯಲ್ಲಿ ಪತ್ರಿಕೆಗಳ ಈ ಹೆಡ್ ಲೈನ್ ಗಳನ್ನು ಅಂಬೇಡ್ಕರರ ಜೊತೆ ಇದ್ದ ಅವರ ಸಹಾಯಕ ಶಂಕರನಾಂದ ಶಾಸ್ತ್ರಿಯವರು ಅಂಬೇಡ್ಕರರಿಗೆ ಹೇಳುತ್ತಿದ್ದಂತೆ ಬಾಬಾಸಾಹೇಬರು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ? This would not be a Red Letter Day, but would be a Dead Letter Day (ಈ ದಿನ ಕೆಂಪು ಅಕ್ಷರಗಳಲ್ಲಿ ಬರೆದಿಡುವ ದಿನವಲ್ಲ, ಬದಲಿಗೆ ಸತ್ತ ಅಕ್ಷರಗಳಲ್ಲಿ ಬರೆದಿಡುವ ದಿನ”)! ಈ ಹಿನ್ನೆಲೆಯಲ್ಲಿ ಅರಿವಾಗುವುದು ತನ್ನ ಜನರ ಹಕ್ಕುಗಳ ರಕ್ಷಣೆ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರರಿಗೆ ಯಾವ ಪರಿಯ ತುಡಿತವಿತ್ತು ಮತ್ತು ಅವರ ಹಕ್ಕುಗಳಿಗೆ ಧಜ್ಕೆಯಾದಾಗ ಅವರ ಆಕ್ರೋಶ ಯಾವ ಪರಿ ಇರುತ್ತಿತ್ತು ಎಂಬುದು.


ಕನ್ನಡಕ್ಕೆ : ರಘೋತ್ತಮ   ಹೋಬ

Wednesday, 7 October 2020

ನಿನ್ನಾಣೆ...

 ನಿನ್ನಾಣೆ ನಿನ್ನ ಹೊರತು ಬೇರಾವ ನಾರಿಯನ್ನೂ ಕಣ್ಣೆತ್ತಿ ನೋಡಿಲ್ಲ ಎನ್ನುವವನ ಕಣ್ತುಂಬ 

ಪರನಾರಿಯರದೇ ಪ್ರತಿಬಿಂಬ...


#ಎಂ.ಕೆ.ಕೆಂಭಾವಿ

Saturday, 19 September 2020

ಹಿಂದಿ ಭಾಷಾ ಹಿನ್ನೆಲೆ

 ಇತ್ತೀಚೆಗೆ ಹಿಂದಿ ಭಾಷೆ ಅನ್ನುವುದು ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಅದು ಮೆಟ್ರೊ ರೈಲು ಮತ್ತು ನಿಲ್ದಾಣಗಳಲ್ಲಿ ಹಿಂದಿ ಬಳಕೆಗೆ ವ್ಯಕ್ತವಾದ ವಿರೋಧ ಆಗಿರಬಹುದು ಅಥವ ಸರ್ಕಾರಿ ಬ್ಯಾಂಕು ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವ ಅಧಿಕಾರಿಗಳ ಕಿರಿಕಿರಿ ಇರಬಹುದು, ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಮುದ್ರಣವಾಗಿದ್ದರ ಬಗ್ಗೆ ಇರಬಹುದು ಅಥವ ಕೇಂದ್ರ ಸರ್ಕಾರ ಹಿಂದಿ ಬಳಕೆ ಬಗ್ಗೆ ತೋರುತ್ತಿರುವ ಅತಿ ಉತ್ಸಾಹವೇ ಇರಬಹುದು, ಒಟ್ಟಿನಲ್ಲಿ ಕನ್ನಡಿಗರಲ್ಲಿ ಮತ್ತು ಒಂದುಮಟ್ಟಿಗೆ ಇಡೀ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಹಿಂದಿ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.


ಈ ಸಂದರ್ಭದಲ್ಲಿ ಹಿಂದಿ ಭಾಷೆ, ಅದರ ಇತಿಹಾಸ, ಸಾಹಿತ್ಯ, ವ್ಯಾಪಕತೆ ಮತ್ತು ಮಹತ್ವದ ಬಗ್ಗೆ ಸ್ಪೆಷಲ್ ರಿಪೋರ್ಟರ್ ನಿಂದ ಒಂದು ವಿಶೇಷ ವರದಿ.


ಭಾರತ ಹಲವು ಭಾಷೆಗಳ ದೇಶ. ಭಾರತದ ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ, ಒಟ್ಟಾರೆ 22 ಅಧಿಕೃತ ಭಾಷೆಗಳಿವೆ. ಇವಲ್ಲದೆ ದೇಶದಲ್ಲಿ 1600ಕ್ಕೂ ಹೆಚ್ಚು ಉಪಭಾಷೆಗಳಿವೆ. ಭಾರತದ ಸಂವಿಧಾನ ಯಾವುದೇ ಭಾಷೆಯನ್ನು ಭಾರತದ ರಾಷ್ಟ್ರಭಾಷೆ ಎಂದು ಗುರುತಿಸಿಲ್ಲ, ಹೀಗಾಗಿ ಹಿಂದಿ, ಭಾರತದ ರಾಷ್ಟ್ರ ಭಾಷೆಯಲ್ಲ. ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ. ಈ ಬಗ್ಗೆ ಸರಿಯಾಗಿ ಗೊತ್ತಿಲ್ಲದ ಕೆಲವರು ಅದನ್ನು ಹಿಂದಿಯನ್ನು ರಾಷ್ಟ್ರಭಾಷೆ ಎಂದು ತಪ್ಪಾಗಿ ಹೇಳುತ್ತಾರೆ. ಹಿಂದಿ ಭಾಷೆ, ಇಂಗ್ಲಿಷ್ ಜೊತೆಗೆ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆ. ಆಡಳಿತ ಭಾಷೆಯೆಂದರೆ, ಸರ್ಕಾರ ತನ್ನ ವ್ಯವಹಾರಗಳಲ್ಲಿ ಬಳಸುವ ಭಾಷೆ. ರಾಷ್ಟ್ರಭಾಷೆಯೆಂದರೆ, ಅದು ಒಂದು ದೇಶದ ರಾಷ್ಟ್ರೀಯತೆಯನ್ನೇ ಬಿಂಬಿಸುವ ಭಾಷೆ.


ಹಿಂದಿ, ಆಧುನಿಕ ಇಂಡೋ ಆರ್ಯನ್ ಭಾಷೆ. ಹಿಂದಿ ಅನ್ನುವುದು ನೇರವಾಗಿ ಸಂಸ್ಕೃತದಿಂದಲೇ ಹುಟ್ಟಿದ ಭಾಷೆ. ಸಂಸ್ಕೃತ ಭಾಷೆ, ಇವತ್ತು ಭಾರತದಲ್ಲಿ ಅಸ್ತಿತ್ವದಲ್ಲಿರುವ ಹಲವು ಭಾಷೆಗಳ ಉದಯಕ್ಕೆ ಕಾರಣವಾಗಿದೆ. ಹಿಂದಿಯನ್ನು ಜಗತ್ತಿನ ಲಿಪಿ ವ್ಯವಸ್ಥೆಯಲ್ಲೇ ಅತ್ಯಂತ ವೈಜ್ಞಾನಿಕವಾದದ್ದು ಎಂದು ಹೇಳಲಾಗುವ ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ಹಿಂದಿ ಭಾಷೆಗೆ, ಸಾಕಷ್ಟು ಆಧುನಿಕ ಚರಿತ್ರೆಯೂ ಇದೆ.


ಭಾರತದ ವಾಯುವ್ಯ ಭಾಗದಲ್ಲಿ ನೆಲೆಸಿದ್ದ ಆರ್ಯನ್ನರು ಬಳಸುತ್ತಿದ್ದ ಈ ಭಾಷೆ, ಸಂಸ್ಕೃತ ಮೂಲದಿಂದ ಉತ್ಪತ್ತಿಯಾಗಿ ಪ್ರಾಕೃತ ಮತ್ತು ಅಪಭ್ರಂಶಗಳಾಗಿ ಹಲವಾರು ಹಂತಗಳಲ್ಲಿ ವಿಕಸನ ಹೊಂದುತ್ತಾ ಬಂದಿದೆ. ಹಿಂದಿ ಭಾಷೆ, ಒಂದು ಫೊನೆಟಿಕ್ ಭಾಷೆ, ಅಂದರೆ ಹೇಗೆ ಬರೆಯುತ್ತೇವೋ ಅದೇ ರೀತಿಯಲ್ಲಿ ಮಾತನಾಡಬಹುದಾದ ಅಥವ ಓದಬಹುದಾದ ಭಾಷೆ. ಯುರೋಪಿಯನ್ ಭಾಷೆಗಳಂತೆ ಎಡದಿಂದ ಬಲಕ್ಕೆ ಬರೆಯುವ ಭಾಷೆ. ಹಿಂದಿ ಅನ್ನುವುದು ಪರ್ಶಿಯನ್ ಪದ ಹಿಂದ್ ಅನ್ನುವುದರಿಂದ ಹುಟ್ಟಿದೆಯಂತೆ. ಹಿಂದ್ ಅಂದರೆ ಸಿಂಧೂ ನದಿಯ ದೇಶ ಎಂದು ಅರ್ಥ.


ಕ್ರಿಸ್ತಶಕ ಏಳನೇ ಶತಮಾನದಲ್ಲಿ ಹಿಂದಿ ಭಾಷೆ, ಸಂಸ್ಕೃತದ ಅಪಭ್ರಂಶ ಅಂದರೆ, ಶಿಷ್ಟ ಭಾಷೆಯ ಸ್ವರೂಪಕ್ಕೆ ಭಿನ್ನವಾದ ರೀತಿಯ ಭಾಷೆಯಾಗಿ ರೂಪುಗೊಳ್ಳುತ್ತಾ ಹೋಯಿತು. ಕ್ರಿಸ್ತಶಕ 4ನೇ ಶತಮಾನದಲ್ಲಿ ಕಾಳಿದಾಸನ ವಿಕ್ರಮೋರ್ವಶೀಯದಲ್ಲಿ ಅಪಭ್ರಂಶ ಕಾಣಿಸಿಕೊಂಡಿತು. ನಂತರ ಐದನೇ ಶತಮಾನದ ಮಧ್ಯಭಾಗದಲ್ಲಿ ಧರಾಸೇನನ ವಲ್ಲಭಿ ಶಾಸನದಲ್ಲೂ ಅಪಭ್ರಂಶ ಸಾಹಿತ್ಯ ಕಂಡುಬರುತ್ತದೆ. ಏಳನೇ ಶತಮಾನದಲ್ಲಿ ಉದ್ಯೋತನ್ ಸೂರಿಯ ಕುವಲಯಮಾಲದಲ್ಲಿ ಹಿಂದಿ ಭಾಷೆಯ ಪ್ರಸ್ತಾಪ ಇದೆ.


ಹತ್ತನೇ ಶತಮಾನದ ಸುಮಾರಿಗೆ ಹಿಂದಿ ಭಾಷೆ, ಒಂದು ಸೂಕ್ತ ಮತ್ತು ಸ್ಥಿರವಾದ ರೂಪ ಪಡೆದಿತ್ತು. ಹಿಂದಿಯ ಉಪಭಾಷೆಗಳಲ್ಲಿ ಬ್ರಜ್ ಭಾಷೆ ತುಂಬಾ ಜನಪ್ರಿಯವಾಗಿತ್ತು, ಆನಂತರ, ಅದರ ಸ್ಥಾನವನ್ನು ಖಡೀಬೋಲಿ ಆಕ್ರಮಿಸಿಕೊಂಡಿತ್ತು. ಕ್ರಿಸ್ತಶಕ ಏಳುನೂರ ಅರವತ್ತೊಂಬತ್ತರಲ್ಲಿ ಸಿದ್ಧ ಸರಹ್ಪಾದ ನೆಂಬ ಸಂತ, ಸಿದ್ಧ ದೋಹ ಕೋಶ ರಚಿಸುತ್ತಾನೆ, ಇವನನ್ನು ಮೊದಲ ಹಿಂದಿ ಕವಿ ಎಂದು ಕರೆಯಲಾಗುತ್ತದೆ. ಕ್ರಿ.ಶ 933ರಲ್ಲಿ ರಚನೆಯಾದ ದೇವಸೇನನ ‘ಶ್ರಾವಕಾಚಾರವನ್ನು’ ಹಿಂದಿಯ ಮೊದಲ ಪುಸ್ತಕವೆಂದು ಹೇಳಲಾಗುತ್ತದೆ. ಕ್ರಿಸ್ತಶಕ ಹನ್ನೊಂದು ಮತ್ತು ಹನ್ನೆರಡನೇ ಶತಮಾನದ ನಡುವೆ ಹೇಮಚಂದ್ರನು ಅಪಭ್ರಂಶ ವ್ಯಾಕರಣದ ಬಗ್ಗೆ ಬರೆದಿದ್ದಾನೆ. ಆನಂತರ ಕ್ರಮೇಣವಾಗಿ ಅಪಭ್ರಂಶ ಕಡಿಮೆಯಾಗಿ ಆಧುನಿಕ ಹಿಂದಿ ಬೆಳೆದು ಬಂತು. ಕ್ರಿಸ್ತಶಕ 1283ರಲ್ಲಿ ಖುಸ್ರೋನ ಪಹೇಲಿಗಳು ಮತ್ತು ಮುಖಾರಿಗಳಲ್ಲಿ ಹಿಂದವಿ ಅನ್ನುವ ಪದ ಬಳಕೆ ಕಂಡುಬರುತ್ತದೆ. ಕ್ರಿ.ಶ 1398 ರಿಂದ 1518ರ ನಡುವೆ ಕಬೀರ್ ದಾಸರ ಹಿಂದಿ ಕೃತಿಗಳು ನಿರ್ಗುಣ ಭಕ್ತಿ ಸಾರುತ್ತವೆ. ಕ್ರಿ.ಶ 1370ರಲ್ಲಿ ಅಸಾಹತನ ಹಂಸಾವಳಿ, ಪ್ರೇಮ ಕಾವ್ಯ ಅಭಿವ್ಯಕ್ತಿಗೊಳಿಸುತ್ತದೆ. ನಂತರ ಹದಿನಾಲ್ಕನೇ ಶತಮಾನದ ಮಧ್ಯಭಾಗದಲ್ಲಿ ಸಂತ ರಮಾನಂದರ ಸಗುಣ ಭಕ್ತಿ ಪರಂಪರೆ ಆರಂಭವಾದರೆ, ಕ್ರಿಸ್ತಶಕ 1580ರ ಸುಮಾರಿನಲ್ಲಿ ಪ್ರಾಚೀನ ದಖಿನಿಯಲ್ಲಿ ಕಲ್ಮಿತುಲ್ ಹಕಾಯತ್ ಕಾವ್ಯವನ್ನು ಬುರ್ಹಾನುದ್ದೀನ್ ಜಾನಮ್ ಬರೆಯುತ್ತಾನೆ.


ಕ್ರಿ.ಶ 1585ರಲ್ಲಿ ನಭದಾಸನ ಭಕ್ತಮಾಲ ಕೃತಿ ಹೊರಬರುತ್ತದೆ. ಕ್ರಿ.ಶ 1601ರಲ್ಲಿ ಬನಾರಸಿ ದಾಸನ ‘ಅರ್ಧ ಕಥಾನಕ’, ಹಿಂದಿಯಲ್ಲಿ ಬರೆದ ಮೊದಲ ಆತ್ಮಕಥೆ ಅನ್ನಿಸಿಕೊಳ್ಳುತ್ತದೆ. ಕ್ರಿಸ್ತಶಕ 1604ರಲ್ಲಿ ಗುರು ಅರ್ಜುನ್ ದೇವರ ಆದಿ ಗ್ರಂಥ, ಹಲವು ಕವಿಗಳ ಕೃತಿಗಳ ಸಂಪಾದನ ಗ್ರಂಥವಾಗಿ ಪ್ರಕಟವಾಗುತ್ತದೆ. ಸುಮಾರು ಹದಿನೈದು ಹದಿನಾರನೇ ಶತಮಾನದಲ್ಲಿ ತುಳಸಿದಾಸರು ಹಿಂದಿಯಲ್ಲಿ ರಾಮಚರಿತ ಮಾನಸ ಬರೆಯುತ್ತಾರೆ.


ಮೊಘಲರು ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ದೆಹಲಿ ಮತ್ತು ಮೀರತ್ ಪ್ರದೇಶದಲ್ಲಿ ಹಿಂದೂಸ್ತಾನಿ ಭಾಷೆ ಬಳಕೆ ಆರಂಭವಾಗುತ್ತದೆ. ಇದು, ಮುಸ್ಲಿಂ ಆಡಳಿತಗಾರರ ಏಕಸ್ವಾಮ್ಯಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಆಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಅಮೀರ್ ಖುಸ್ರೊ, ಕಬೀರ್, ದಾದು, ಅಕ್ಬರನ ಆಸ್ಥಾನ ಕವಿ ರಹೀಮ್ ಕಾಲದಲ್ಲಿ ಹಿಂದಿಯ ಜನಪ್ರಿಯತೆ ಹೆಚ್ಚಾಗುತ್ತದೆ.


ಆನಂತರ ಬ್ರಿಟಿಷರ ಆಡಳಿತ ಕಾಲದಲ್ಲಿ, ಒಂದೇ ರೀತಿಯಾಗಿದ್ದ ಹಲವು ಉಪಭಾಷೆಗಳನ್ನು ಒಗ್ಗೂಡಿಸಿ ಅದನ್ನು ಹಿಂದೂಸ್ತಾನಿ ಎಂದು ಕರೆಯಲಾಯಿತು. ಹಿಂದೂಸ್ತಾನಿ ಭಾಷೆಯಾಗಿ ಬೆಳೆದ ಹಿಂದಿ, ದೇಶದ ಅಧಿಕೃತ ಭಾಷೆ ಆಗಿತ್ತು. ಕ್ರಿಸ್ತಶಕ 1796ರಲ್ಲಿ ಮೊದಲ ಬಾರಿ ದೇವನಾಗರಿ ಲಿಪಿಯಲ್ಲಿ ಹಿಂದಿ ಭಾಷೆಯ ಅಚ್ಚುಮೊಳೆ ಆಧಾರಿತ ಮುದ್ರಣ ಆರಂಭವಾಯಿತು. ಕೊಲ್ಕತ್ತಾದಿಂದ ಜಾನ್ ಗಿಲ್ಕ್ರಿಸ್ಟ್ ನ “Grammar of the Hindoostanee Language” ಪ್ರಕಟವಾಯಿತು. 1805ರಲ್ಲಿ ಲಲ್ಲೂ ಲಾಲ್ ಅವರ ಪ್ರೇಮ್ ಸಾಗರ್ ಕೃತಿಯನ್ನು ಕೊಲ್ಕತ್ತಾದ ಫೋರ್ಟ್ ವಿಲಿಯಮ್ ಕಾಲೇಜಿನವರು ಪ್ರಕಟಿಸಿದರು.


ಕ್ರಿಸ್ತಶಕ 1826ರಲ್ಲಿ ‘ಉದಂತ ಮಾರ್ತಾಂಡ’ ಎಂಬ ಹೆಸರಿನ ಹಿಂದಿ ವಾರ ಪತ್ರಿಕೆ ಕೊಲ್ಕತ್ತಾದಲ್ಲಿ ಆರಂಭವಾಯಿತು. 1839 ರಿಂದ 1847ರ ನಡುವೆ Garcin de Tassy ಅನ್ನುವವರು " History of Hindi Literature&quot" ಎಂಬ ಗ್ರಂಥವನ್ನು ಫ್ರೆಂಚ್ ಭಾಷೆಯಲ್ಲಿ ರಚಿಸುತ್ತಾರೆ.


1854ರಲ್ಲಿ ಕೊಲ್ಕತ್ತಾದಿಂದಲೇ ‘ಸಮಾಚಾರ್ ಸುಧಾವರ್ಷನ್’ ಎಂಬ ಹಿಂದಿ ದಿನಪತ್ರಿಕೆ ಆರಂಭವಾಗುತ್ತದೆ. 1873ರಲ್ಲಿ ಮಹೇಂದ್ರ ಭಟ್ಟಾಚಾರ್ಯರ ‘ಪದಾರ್ಥ ವಿಜ್ಞಾನ’ ಎಂಬ ರಸಾಯನ ಶಾಸ್ತ್ರದ ಪುಸ್ತಕ, ಹಿಂದಿಯಲ್ಲಿ ಮುದ್ರಣವಾಗುತ್ತದೆ. ‘ಜೈ ಜಗದೀಶ್ ಹರೇ’ ಎಂಬ ಪ್ರಖ್ಯಾತ ಗೀತೆಯನ್ನು ಬರೆದ ಕವಿ ಶ್ರದ್ಧಾರಾಮ್ ಫಿಲ್ಲೌರಿ ಅವರ ಭಾಗ್ಯವತಿ ಕಾದಂಬರಿ ಪ್ರಕಟವಾಗುತ್ತದೆ. 1886ರಿಂದ ಆಧುನಿಕ ಹಿಂದಿ ಸಾಹಿತ್ಯದಲ್ಲಿ ಭರತೇಂದು ಯುಗ ಆರಂಭವಾಗುತ್ತದೆ. 1900ರಿಂದ ದ್ವಿವೇದಿ ಯುಗ ಆರಂಭ. 1913ರಲ್ಲಿ ದಾದಾ ಸಾಹೇಬ್ ಫಾಲ್ಕೆ ಅವರು, ಮೊದಲ ಹಿಂದಿ ಚಿತ್ರ ‘ರಾಜಾ ಹರಿಶ್ಚಂದ್ರ’ವನ್ನು ನಿರ್ಮಿಸುತ್ತಾರೆ.


1918 ರಿಂದ 1938 ವರೆಗಿನ ಹಿಂದಿಯನ್ನು ಛಾಯಾವಾದದ ಕಾಲ ಎಂದು ಕರೆಯುತ್ತಾರೆ. 1918ರಲ್ಲಿ ಮಹಾತ್ಮ ಗಾಂಧಿಯವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸ್ಥಾಪಿಸುತ್ತಾರೆ. 1929ರಲ್ಲಿ ರಾಮಚಂದ್ರ ಶುಕ್ಲ ಅವರ " History of Hindi Literature" ಪ್ರಕಟವಾಗುತ್ತದೆ. 1930ರ ಸುಮಾರಿನಲ್ಲಿ ಶೈಲೇಂದ್ರ ಮೆಹ್ತಾ ಅವರು ಹಿಂದಿ ಟೈಪ್ ರೈಟರ್ ಗಳನ್ನು ತಯಾರಿಸುತ್ತಾರೆ. 1931ರಲ್ಲಿ ಮೊದಲ ಹಿಂದಿ ವಾಕ್ ಚಿತ್ರ ‘ಆಲಮ್ ಆರ’ ತೆರೆಕಾಣುತ್ತದೆ.


ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರ, ಹಿಂದಿಯ ವ್ಯಾಕರಣವನ್ನು ಪ್ರಮಾಣೀಕರಿಸಿ ಮಾನಕ್ ಹಿಂದಿಯಾಗಿ ರೂಪಿಸಿತು. ಪ್ರತಿವರ್ಷ ಸೆಪ್ಟಂಬರ್ 14ನ್ನು ದೇಶಾದ್ಯಂತ ಹಿಂದಿ ದಿವಸವೆಂದು ಆಚರಿಸಲಾಗುತ್ತದೆ. 1949ರ ಈ ದಿನ, ಹಿಂದಿಯನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆ ಎಂದು ಘೋಷಿಸಿದ ದಿವಸ. ಭಾರತ ಮತ್ತು ಪಾಕಿಸ್ತಾನಗಳು ಪ್ರತ್ಯೇಕ ರಾಷ್ಟ್ರಗಳಾದಾಗ, ಹಿಂದಿ ಮತ್ತು ಉರ್ದು ಭಾಷೆಗಳು ಅಧಿಕೃತವಾದವು. ಆದರೆ, ಈ ಹಿಂದಿ ಮತ್ತು ಉರ್ದು ಎರಡೂ ಭಾಷೆಗಳೂ ಕೂಡ ಹಿಂದೂಸ್ತಾನಿ ಎಂದು ಕರೆಯಲ್ಪಡುವ ಭಾಷೆಯೇ. ಇವೆರಡರ ನಡುವೆ ಕೇವಲ ರಾಜಕೀಯ ವ್ಯತ್ಯಾಸ ಉಂಟೇ ಹೊರತು ಬೇರೆ ಹೆಚ್ಚೇನೂ ಇಲ್ಲ. ಹಿಂದಿ ಭಾಷೆ ದೇವನಾಗರಿ ಲಿಪಿ ಬಳಸಿದರೆ, ಉರ್ದು ಭಾಷೆ ಪರ್ಷಿಯನ್ ಲಿಪಿಯನ್ನು ಬಳಸುತ್ತದೆ. ಮಾರ್ವಾಡಿ, ಬುಂದೇಲಿ, ಕನೂಜಿ, ಬಾಘೇಲಿ, ಔಧ್, ಭೋಜ್ಪುರಿ ಇತ್ಯಾದಿಗಳು ಹಿಂದಿಯ ಉಪಭಾಷೆಗಳಾಗಿವೆ. ಪಂಜಾಬಿ ಮತ್ತು ಮೈಥಿಲಿ ಭಾಷೆಗಳನ್ನು ಕೆಲವೊಮ್ಮೆ ಸ್ವತಂತ್ರ ಭಾಷೆಗಳು ಎಂದರೆ ಮತ್ತೆ ಕೆಲವೊಮ್ಮೆ ಹಿಂದಿಯ ಉಪಭಾಷೆಗಳು ಎಂದು ಕರೆಯಲಾಗುತ್ತದೆ.


ಹಿಂದಿ ಭಾಷೆಯನ್ನು ಹಿಂದವಿ, ಹಿಂದೂಸ್ತಾನಿ ಮತ್ತು ಖಡೀಬೋಲಿ ಎಂದೂ ಕೂಡ ಕರೆಯಲಾಗುತ್ತದೆ. ಖಡೀಬೋಲಿ ಅಂದರೆ ಶಿಷ್ಟ ಹಿಂದಿ ಭಾಷೆ ಎಂದು ಅರ್ಥ. ಹಿಂದಿ ಭಾಷೆಯ ಮೇಲೆ ದ್ರಾವಿಡ ಭಾಷೆಗಳು, ಪಾರ್ಸಿ, ತುರ್ಕಿ, ಅರಬ್ಬಿ, ಪೋರ್ಚುಗೀಸ್ ಮತ್ತು ಇಂಗ್ಲಿಷ್ ಭಾಷೆಗಳ ಪ್ರಭಾವ ಆಗಿದೆ.


1965ರಲ್ಲಿ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಆರಂಭವಾದ ನಂತರ, ಈವರೆಗೆ ಹಿಂದಿಯ ಹತ್ತು ಜನ ಸಾಹಿತಿಗಳಿಗೆ ‘ಜ್ಞಾನ ಪೀಠ’ ಪ್ರಶಸ್ತಿಗಳು ಸಂದಿವೆ. ಹಿಂದಿ ಒಂದು ಭಾವ ಪೂರ್ಣ ಅಭಿವ್ಯಕ್ತಿಯ ಭಾಷೆ. ಕಾವ್ಯ ಮತ್ತು ಗೀತೆಗಳಲ್ಲಿ ಸರಳ ಹಿಂದಿ ಶಬ್ದಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ನಿಖರ ಮತ್ತು ತಾರ್ಕಿಕ ವಾದ ಮಂಡನೆಗೂ ಹಿಂದಿ ಸಮರ್ಥವಾಗಿದೆ. 1997ರ ಒಂದು ಸಮೀಕ್ಷೆ ಪ್ರಕಾರ ಭಾರತದ ಜನಸಂಖ್ಯೆಯ ಶೇ 66ರಷ್ಟು ಜನರು ಹಿಂದಿ ಭಾಷೆಯಲ್ಲಿ ಮಾತನಾಡಬಲ್ಲರು. ಹಿಂದಿ ಭಾಷೆ, ದೆಹಲಿ, ಹರಿಯಾಣ, ಬಿಹಾರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಛತ್ತೀಸ್ ಘಡ, ಜಾರ್ಖಂಡ್ ಮತ್ತು ರಾಜಸ್ಥಾನಗಳ ಅಧಿಕೃತ ಭಾಷೆ.


ಮುಂಬೈ, ಹೈದರಾಬಾದ್, ಬೆಂಗಳೂರು, ಕೊಲ್ಕತ್ತಾಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಹಿಂದಿ ಮಾತನಾಡುವವರಿದ್ದಾರೆ. ಅಮೆರಿಕದಲ್ಲಿ ಸುಮಾರು ಒಂದು ಲಕ್ಷ ಹಿಂದಿ ಭಾಷಿಕರಿದ್ದಾರೆ, ಮಾರಿಷಿಯಸ್ ದೇಶದಲ್ಲಿ ಏಳು ಲಕ್ಷ, ದಕ್ಷಿಣ ಆಫ್ರಿಕದಲ್ಲಿ ಸುಮಾರು 9 ಲಕ್ಷ, ಯೆಮನ್ ದೇಶದಲ್ಲಿ ಒಂದೂವರೆ ಲಕ್ಷ, ನ್ಯೂಜಿಲೆಂಡ್ ನಲ್ಲಿ 20 ಸಾವಿರ, ಜರ್ಮನಿಯಲ್ಲಿ ಮೂವತ್ತು ಸಾವಿರ, ನೇಪಾಳದಲ್ಲಿ ಎಂಬತ್ತು ಲಕ್ಷ ಜನರು ಹಿಂದಿ ಮಾತನಾಡುತ್ತಾರೆ. ಸುರಿನಾಮ್, ಫಿಜಿ, ಟ್ರಿನಿಡಾಡ್ ಮತ್ತು ಟೊಬ್ಯಾಗೊದಲ್ಲೂ ಹಿಂದಿ ಭಾಷೆ ಬಳಸುತ್ತಾರೆ. ಬಾಲಿವುಡ್ಡಿನಲ್ಲಿ ಬಳಸುವ ಹಿಂದಿಯನ್ನು ಬಂಬೈಯ್ಯಾ ಹಿಂದಿ ಅಥವ ‘ಬಾಂಬೆ ಬಾತ್’ ಅನ್ನುತ್ತಾರೆ, ಅದು ಮರಾಠಿ ಭಾಷೆಯ ಗಾಢ ಪ್ರಭಾವ ಹೊಂದಿದೆ. ಬಂಬೈಯ್ಯಾ ಹಿಂದಿ ಅಥವ ಮುಂಬೈ ಹಿಂದಿ ಅನ್ನುವುದು ನಾನಾ ಭಾಷೆಗಳ ಮಿಶ್ರಣವಾಗಿದೆ. ಚೀನಾದ Mandarin ಭಾಷೆಯನ್ನು ಐವತ್ತೇಳು ಕೋಟಿ ಮೂಲಭಾಷಿಕರು ಮತ್ತು ಒಟ್ಟಾರೆಯಾಗಿ ನೂರಮುವತ್ತು ಕೋಟಿ ಜನರು ಮಾತನಾಡಿದರೆ, ಹಿಂದಿಯಲ್ಲಿ ಸುಮಾರು 57 ಕೋಟಿ ಮೂಲಭಾಷಿಕರಿದ್ದು, ಇಡೀ ಜಗತ್ತಿನಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಸುಮಾರು 97 ಕೋಟಿ ಎಂದು ಹೇಳಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕ್ರಾಂತಿಯಿಂದ ಜಾಗತಿಕ ಮಾರುಕಟ್ಟೆಗೆ ಭಾರತೀಯರ ಪ್ರವೇಶ ಆಗುತ್ತಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಹಿಂದಿ ಭಾಷೆ ಹಬ್ಬುತ್ತಿದೆ. ಇವತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಮೂಲವಾಗಿರುವ ಆರೆಸ್ಸೆಸ್‌ ಅಥವ ರಾಷ್ಟ್ರೀಯ ಸ್ವಯಂ ಸೇವಾ ಸಂಘದವರಿಗೂ ಹಿಂದಿ ಬಗ್ಗೆ ಅಪಾರ ಮಮತೆ. ಆರೆಸ್ಸೆಸ್ ನವರು ಹಿಂದಿ ಭಾಷೆ, ಇಡೀ ದೇಶವನ್ನು ಒಗ್ಗೂಡಿಸುವ ಭಾಷೆ ಎಂದು ಬಣ್ಣಿಸುತ್ತಾರೆ. ಹಿಂದಿ ಭಾರತದ ಶಕ್ತಿ ಎಂದು ಹೇಳುತ್ತಾರೆ. ಮಹಾತ್ಮಗಾಂಧಿಯವರೂ ಕೂಡ, ಹಿಂದಿಯನ್ನು ಭಾರತದ ರಾಷ್ಟ್ರಭಾಷೆಯಾಗಿ ಮಾಡಬೇಕು ಎಂಬ ಅಭಿಪ್ರಾಯ ಹೊಂದಿದ್ದರಂತೆ. ಅವರೂ ಕೂಡ ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುತ್ತದೆ ಎಂಬ ಅಭಿಪ್ರಾಯ ಹೊಂದಿದ್ದರಂತೆ. ಭಾರತದ ಎಲ್ಲಾ ಭಾಗಗಳಿಂದ ಭಾರತೀಯ ಸೇನೆ ಸೇರುವ ಯೋಧರಿಗೆ ಮಾತನಾಡುವ ಮಟ್ಟಿಗೆ ಹಿಂದಿ ಕಲಿಸಲಾಗುತ್ತದೆ. ಜಗತ್ತಿನ ಇತರೆ ಭಾಗಗಳಲ್ಲಿ ನೆಲೆಸಿರುವ ಭಾರತೀಯರಿಗೂ ಹಿಂದಿ ಒಂದು ಲಿಂಕ್ ಭಾಷೆ ಆಗಿದೆ. ಒಟ್ಟಿನಲ್ಲಿ ಭಾರತದ ಪ್ರಮುಖ ಭಾಷೆಗಳಲ್ಲಿ ತೀರಾ ಇತ್ತೀಚಿನದಾಗಿದ್ದರೂ ಕೂಡ, ಹಿಂದಿ ಭಾಷೆ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ಹಿಂದಿ ಒಂದು ಭಾಷೆಯಾಗಿ ಬೆಳೆಯುವುದಕ್ಕೆ ಯಾರದೇ ಆಕ್ಷೇಪಣೆಯಿಲ್ಲ, ಆದರೆ ಅದರಿಂದ, ಹಿಂದಿಯೇತರ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆ ಆಗಬಾರದು ಅಷ್ಟೇ.


ಕೃಪೆ : ಸೂಪರ್ ಸುದ್ಧಿ ಜಾಲತಾಣ


 

Sunday, 13 September 2020

ಕನ್ನಡ ❤️ ಹೃದಯ
 ಕನ್ನಡದ ಹೊರತು 

ಏನಿದಿಯೋ ಅಣ್ಣಾ...

ಹಿಂದಿ ಇಂಗ್ಲೀಷು

ಬರಿ ಬಂಡವಾಳದ ಬಣ್ಣಾ... 


ಕನ್ನಡ ಬರಿ ಭಾಷೆಯಲ್ಲೋ...ಅಣ್ಣಾ 

ನಿನ್ನ ನನ್ನ ಗುರುತು


ಅಳಿದ ಸಾಮ್ರಾಜ್ಯ

ಉಳಿದ ಮನಸುಗಳಲಿ 

ಕಂಪಿಸುವುದು ಕನ್ನಡ


ಜನಮಾನಸ ತುಡಿತ ಮಿಡಿತಗಳ ಹೃದಯದೊಳಗೆ ಚಿ ಜ್ಯೋತಿಯಾಗಿಹುದು ಕನ್ನಡ...


ಪಂಪ , ಕುಮಾರವ್ಯಾಸ, ಕುವೆಂಪು , ಬಸವಗಲ್ಲದೆ ಅನಕ್ಷರಸ್ಥ ಅಜ್ಜನಿಗೂ ಒಗ್ಗುವುದು  ನನ್ನೀ...ಕನ್ನಡ...


                                      ~ಎಂ.ಕೆ.ಕೆಂಭಾವಿ

Monday, 29 June 2020

ಅಂಬಾನಿ ಅದಾನೀಸ್ ಆಸ್ಥಾನದಲ್ಲಿ ಪ್ರಧಾನಿಯೇ ನರ್ತಕಿಯಾದರೆ?!
ನೆನಪಿದೆಯಾ? ಕಳೆದ ಲೋಕಸಭಾ ಚುನಾವಣೆಗೆ ಮುನ್ನಾ ಮೋದಿಯವರ ನಾಲಿಗೆ ನುಡಿದ ಒಂದು ಮಾತು- “ನಾವು ಅಧಿಕಾರಕ್ಕೆ ಬಂದರೆ ರೈತರ ಆತ್ಮಹತ್ಯೆಯನ್ನು ಶೂನ್ಯ ಮಾಡುತ್ತೇವೆ, ಜೀರೋ ಮಾಡುತ್ತೇವೆ.” – ಈ ಮಾತನ್ನು ಬಿಜೆಪಿಯವರು ದೇಶದ ಉದ್ದಗಲಕ್ಕೂ ಜಪಿಸಿದರು. ಮೋಡಿ ಹಾಕಿದರು. ಮತದಾರರು ಮರುಳಾದರು. ಆಯ್ತು, ಬಿಜೆಪಿ ಅಧಿಕಾರಕ್ಕೂ ಬಂತು. ಮೋದಿಯವರು ಪ್ರಧಾನಿಯೂ ಆದರು. ರೈತರ ಆತ್ಮಹತ್ಯೆಯನ್ನು ಶೂನ್ಯ ಮಾಡುತ್ತೇವೆಂದ ಮೋದಿಯ ಬಿಜೆಪಿ ಸರ್ಕಾರ ಮಾಡಿದ್ದೇನು? ಭೂ ಸ್ವಾಧೀನ ಸುಗ್ರೀವಾಜ್ಞೆ ತಂದಿತು! ರೈತರನ್ನು ಭೂಮಿಯಿಂದ ಕಿತ್ತೆಸೆದು ಅವರನ್ನು ಭೂಹೀನರನ್ನಾಗಿಸಿ ರೈತರೇ ಶೂನ್ಯವಾಗುವÀ ಕಾಯಿದೆ – ಈ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯಿದೆ!
ಸ್ವಲ್ಪ ಯೋಚನೆ ಮಾಡಿ- ಭೂಮಿ ಇಟ್ಟುಕೊಂಡವನು ಆತ್ಮಹತ್ಯೆ ಮಾಡಿಕೊಂಡರೆ ತಾನೇ ಅದು ರೈತನ ಆತ್ಮಹತ್ಯೆ? ಭೂಮಿಗೆ ಅಂಟಿಕೊಂಡು ಜೀವಿಸುವ ರೈತರನ್ನು ಉಳಿಸಿ ಅವರ ಆತ್ಮಹತ್ಯೆಯನ್ನು ಶೂನ್ಯ ಮಾಡುವ ಬದಲು ಭೂಮಿಯಿಂದ ರೈತರನ್ನು ಕ್ರೂರವಾಗಿ ಕಿತ್ತೆಸೆÀದು ರೈತರನ್ನೇ ಶೂನ್ಯ ಮಾಡುವುದೇ ಈ ಬಿಜೆಪಿ ಸರ್ಕಾರದ ಭೂ ಸ್ವಾಧೀನ ಮಸೂದೆಯೆಂಬ ಈ ಜೇಡರ ಬಲೆಯ ಕಾರ್ಯಕ್ರಮ.
ಭಾರತದ ಭೂಮಿಯ ಜೀವಂತಿಕೆಯನ್ನು ಅರಿತವರು, ಇಂಥ ಭೂ ಸ್ವಾಧೀನ ಕಾನೂನು ಮಾಡಲಾರರು. ಭಾರತದಲ್ಲಿ ಭೂಮಿ ಅಂದರೆ ಒಂದು ವೃಕ್ಷ ಇದ್ದಂತೆ. ಆ ವೃಕ್ಷ ಆಧರಿಸಿ ಪಶು, ಪಕ್ಷಿ, ಜಾನುವಾರುಗಳು ತಮ್ಮ ಬದುಕು ಕಟ್ಟಿಕೊಳ್ಳುವಂತೆ- ಒಂದು ಎಕರೆ ಭೂಮಿಯಲ್ಲೇ ಆ ಭೂಮಿಯ ರೈತನಷ್ಟೇ ಅಲ್ಲದೆ ಸುತ್ತಮುತ್ತಲಿನ ಹತ್ತಾರು ಕುಟುಂಬಗಳು ತಂತಮ್ಮ ಗಂಜಿ ಹುಟ್ಟಿಸಿ ಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ! ರೈತ ತನ್ನ ಭೂಮಿ ಜತೆ ನೇರವಾಗಿ ಸಂಬಂಧಪಟ್ಟವನಾಗಿ ಬದುಕು ಕಟ್ಟಿಕೊಂಡರೆ ಸುತ್ತಮುತ್ತಲಿನ ಅನೇಕ ಜೀವಗಳು ಪರೋಕ್ಷವಾಗಿ ಆ ಭೂಮಿಗೆ ನಂಟುಳ್ಳವರಾಗಿರುತ್ತಾರೆ. ಇದು ಭಾರತದ ಕೃಷಿ ಬದುಕು. ಇದು ಭಾರತದ ಭೂಮಿಯ ಲಕ್ಷಣ. ಹಾಗೇ ಜೀವನ ವೈಶಿಷ್ಟತೆ. ಇದೇ ಹಳ್ಳಿಗಾಡಿನ ಸಂಸ್ಕøತಿ ಕೂಡ. ಇದನ್ನು ಅರಿಯದವರು ದೆಹಲಿಯಲ್ಲಿ ಕೂತುಕೊಂಡು ಈ ಭೂಸ್ವಾಧೀನ ಕಾಯ್ದೆ ತಂದಿದ್ದಾರೆ.
ಆಗ ಬ್ರಿಟಿಷರಿಗೆ ಭಾರತ ಗುಲಾಮ ಆಗಿತ್ತು. ಅವರೂ ಈ ಹಿಂದೆ ಇಂಥದೇ ಭೂ ಸ್ವಾಧೀನ ಕಾಯ್ದೆ ತಂದಿದ್ದರು. ಅದನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಬ್ರಿಟಿಷ್ ಭೂ ಸ್ವಾಧೀನ ಕಾಯ್ದೆಗಿಂತಲೂ ಅತ್ತತ್ತ ಅನ್ನುವಂತೆ, ಜನರನ್ನು ಜಾನುವಾರುಗಳು ಎಂಬಂತೆ ಕಾಣುವ ಈ ಭೂಸ್ವಾಧೀನ ಕಾಯ್ದೆಯನ್ನು ನಮ್ಮವರೇ ತಂದರೆ ಇದನ್ನು ಹೇಗೆ ಅರ್ಥ ಮಾಡಿಕೊಳ್ಳೋಣ? ನಮ್ಮವರಿಗೆ ನಾವೇ ಗುಲಾಮರೇ? ಅರ್ಥವಾಗುತ್ತಿಲ್ಲ. ಒಂದು ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಆ ಉದ್ದೇಶಕ್ಕೆ ಬಳಸಲ್ಪಡದಿದ್ದರೆ- ಅದನ್ನು ರೈತರಿಗೆ ಹಿಂತಿರುಗಿಸುವುದಿಲ್ಲವಂತೆ. ಇದು ಪರಮ ವಂಚನೆ ಅಲ್ಲವೆ? ಇದರೊಳಗೆ ಲ್ಯಾಂಡ್ ಮಾಫಿಯಾ ವಹಿವಾಟು ಅಡಗಿ ಕೂತಿದೆ. ಇದು ದ್ರೋಹವಲ್ಲವೆ?
ಹಿಂದೆ ರಾಜರುಗಳು ಇದ್ದರು. ಆ ರಾಜರ ಇಚ್ಛೆಗೆ ತಕ್ಕಂತೆ ವೇಷಭೂಷಣ ಹಾಕಿ ನರ್ತಿಸುವ ನರ್ತಕಿಯರೂ ಇದ್ದರು. ಈಗ ಭಾರತದಲ್ಲಿ ಅಂಬಾನಿ, ಅದಾನಿ ಇತ್ಯಾದಿಗಳೇ ರಾಜರುಗಳು ಆಗಿಬಿಟ್ಟಿದ್ದಾರೆ. ನಮ್ಮ ಪ್ರಧಾನಿ, ಮಂತ್ರಿ ಮಹೋದಯರು ಬಂಡವಾಳಗಾರರ ಆಸ್ಥಾನದಲ್ಲಿ ತರಾವರಿ ವೇಷ ಹಾಕಿಕೊಂಡು ಕುಣಿಯುವ ನರ್ತಕಿಯರಾಗಿ ಬಿಟ್ಟಿದ್ದಾರೆ. ಬಂಡವಾಳಗಾರರು ಕಾಲ್ಸನ್ನೆಯಲ್ಲಿ ತೋರಿಸಿದ್ದನ್ನು ನಮ್ಮ ಮಂತ್ರಿ ಮಹೋದಯರುಗಳು ಕೈಮುಗಿದು ಕಾನೂನು ಮಾಡುತ್ತಿದ್ದಾರೆ. ರಾಜ್ಯಗಳ ಮಂತ್ರಿ ಮಹೋದಯರುಗಳು ತಮ್ಮ ಚಾನ್ಸ್‍ಗಾಗಿ ಹಲ್ಲುಗಿಂಚುತ್ತಿದ್ದಾರೆ. ಇದು ಭಾರತದಲ್ಲಿ ಬಂಡವಾಳ ಮತ್ತು ರಾಜಕಾರಣದ ಜಂಟಿ ಘೋರ ದುರಂತ ನಾಟಕ. ಈ ದುರಂತ ನಾಟಕದ ಕೊನೆ ಎಲ್ಲಿ ಮುಟ್ಟಬಹುದು? ನಮ್ಮ ಕಣ್ಣೆದುರಿಗೆ ಕಾಣುತ್ತಿರುವುದನ್ನೇ ನೋಡಿ ಹೇಳುವುದಾದರೆ, ಈ ಕ್ಯಾನ್ಸರ್ ಅಭಿವೃದ್ಧಿಯ ಲಕ್ಷಣವು ಬಾಂಬೆಯ ಕೊಳೆಗೇರಿಯೊಂದರ ನಡುವೆ ಆಕಾಶಕ್ಕೆ ಚಾಚುತ್ತಾ ನಿಂತಿರುವ ಅಂಬಾನಿಯ ಸಂಪತ್ತಿನ ದೌಲತ್ತಿನಲ್ಲಿ ಈಗಾಗಲೇ ಕಾಣಿಸಿ ಕೊಂಡಿದೆ. ಅಂಬಾನಿ ನಿವಾಸ ಇರುವ ಈ ಕೊಳೆಗೇರಿ ಬಡಾವಣೆಯ ಸಂಪತ್ತಿನ ಸರಾಸರಿ ಅಂದರೆ, ಜಿಡಿಪಿ ದರ ತೆಗೆದರೆ -ಆಗ ಆ ಕೊಳೆಗೇರಿ ನಿವಾಸಿಗಳೆಲ್ಲರೂ ಲೆಕ್ಕದಲ್ಲಿ ಕೋಟ್ಯಾಧೀಶ್ವರರಾಗಿ ಬಿಡುತ್ತಾರೆ! ಆದರೆ ವಾಸ್ತವದಲ್ಲಿ ಆ ಕೊಳೆಗೇರಿಯ ಮುಕ್ಕಾಲು ಪಾಲು ಜನ ದಿನಕ್ಕೆ ನೂರು ರೂಪಾಯನ್ನೂ ಕಾಣದೇ ಹಸಿದು ಮಲಗಿರಲೂಬಹುದು. ಹೀಗೆ ಸಂಪತ್ತು ಪೈಶಾಚಿಕ ಆಗುವುದನ್ನು ಈಗಲಾದರೂ ಎಚ್ಚೆತ್ತುಕೊಂಡು ತಡೆಯದಿದ್ದರೆ, ಇದು ಇಡೀ ಭಾರತದ ನಾಳಿನ ದೃಶ್ಯಾವಳಿ ಆಗಿಬಿಡಬಹುದು. ಇದು ಕೊನೆಗೆ ಭಾರತವನ್ನು ವೇಶ್ಯಾವಾಟಿಕಾ ಪ್ರವಾಸೋದ್ಯಮ ರಾಷ್ಟ್ರವಾಗಿಸಿ ಹೊಟ್ಟೆ ಯಾಪ್ತಿ ಮಾಡುವಲ್ಲಿಗೆ ತಂದುಬಿಡಬಹುದೇನೋ? ಭಾರತ ಮಾತೆ ಎಂದು ಉಚ್ಚರಿಸುವವರು ಇದನ್ನು ಕಾಣಬೇಕಾಗಿದೆ.
ಜೊತೆಗೆ, ವಿದೇಶಿ ಬಂಡವಾಳಶಾಹಿ ಸ್ವಭಾವವೇ ಬೇರೆ- ಭಾರತದ ಬಂಡವಾಳಶಾಹಿ ಸ್ವಭಾವವೇ ಬೇರೆ. ಭಾರತದ ಬಂಡವಾಳಶಾಹಿ ಬಕಾಸುರನ ಸಂತಾನ. ಸ್ವಾರ್ಥಿ ಹಾಗೂ ನಿರ್ಲಜ್ಜ. ಭಾರತದಲ್ಲಿ ಖಾಸಗಿ ಎಂದರೆ- ಹೆಚ್ಚೂ ಕಮ್ಮಿ ಜಾತಿಯಂತೇ ಆಗಿ ಬಿಡುತ್ತದೆ. ಅದು ನಿರ್ದಯಿ ಕೂಡ. ಇದನ್ನು ನಮ್ಮ ವಿದ್ಯಾವಂತ ನಾಗರಿಕರ ವಾಸಸ್ಥಳಗಳು ಆಯಾಯಾ ಜಾತಿಗೆ ಅನುಗುಣ ಬಡಾವಣೆಗಳಾಗಿ ನಿರ್ಮಾಣವಾಗುತ್ತಿರುವುದನ್ನು ನೋಡಿದರೂ ಕಾಣಬಹುದು.
ಇದರ ನಡುವೆ ಇತ್ತೀಚೆಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ಜೈರಾಂ ರಮೇಶ್ ಹೇಳಿದರು –‘ಎನ್.ಡಿ.ಎ. ಈ ಭೂಸ್ವಾಧೀನ ಕಾಯ್ದೆ ತಂದಿರುವುದು ಕಾಂಗ್ರೆಸ್ ಪುನಶ್ಚೇತನಕ್ಕೆ ಒಂದು ಸದವಕಾಶ’ ಅಂತ. ಈ ಮಾತು ಗಾಯದ ಮೇಲೆ ಎಳೆದ ಬರೆ. ಎನ್.ಡಿ.ಎ. ಸರ್ಕಾರದ ಈ ಭೂಸ್ವಾಧೀನ ಕಾಯಿದೆ ವಿರುದ್ಧದ ಹೋರಾಟವಿದೆಯಲ್ಲ, ಇದು ಪಕ್ಷಾತೀತ ಹೋರಾಟ. ಈ ಹೋರಾಟದ ಮುಂದೆ ಪಕ್ಷಗಳು ಕ್ಷುಲ್ಲಕ. ಉರಿಯುತ್ತಿರುವ ಮನೆಯಲ್ಲಿ ಗಳ ಇರಿಯಬಾರದು. ಬಾಯಿಬಿಟ್ಟರೆ ಮಾತೃಭೂಮಿ, ಮಾತೃಭೂಮಿ ಎನ್ನುವ ಆರ್‍ಎಸ್‍ಎಸ್‍ನವರು – ಅವರಲ್ಲಿ ಎಚ್ಚರ ಇರುವವರು ಇದ್ದಲ್ಲಿ – ಅವರು ಕೂಡ ಮಾಡಬೇಕಾದ ಹೋರಾಟ ಇದು. ಅವರು ಬೆಂಬಲಿಸಿದ ಪ್ರಧಾನಿ ಮೋದಿಯವರು `ಮಾತೃಭೂಮಿಯ ಮಾರಾಟಗಾರ’ ಎಂಬ ಬಿರುದಿಗೆ ಬಾಧ್ಯರಾಗುವುದನ್ನು ತಪ್ಪಿಸುವ ಹೊಣೆಗಾರಿಕೆ ಅವರ ಮೇಲೂ ಇದೆ.
ಇದು ಎಲ್ಲರೂ ಎಚ್ಚರಗೊಳ್ಳಬೇಕಾದ ಕಾಲ. ಅನ್ನ ತಿನ್ನುವರೆಲ್ಲರೂ ಈ ಎನ್‍ಡಿಎ ಭೂಸ್ವಾಧೀನ ಕಾಯ್ದೆಯನ್ನು ಪ್ರತಿಭಟಿಸಬೇಕಾಗಿದೆ.
ನೆನಪಿರಲಿ, ಮಹಾಕವಿ ಬೇಂದ್ರೆಯವರ ಚಿಗರಿಗಂಗಳ ಚೆಲುವಿ ಕವಿತೆಯ ಸಾಲುಗಳು. ತನ್ನ ವಿಧ್ವಂಸಕ ಮಕ್ಕಳಿಂದಲೇ ಧಾಳಿಗೊಳಗಾದ ಭೂಮಿ ತಾಯಿ ಚೀತ್ಕರಿಸುತ್ತಾಳೆ : “ಇದು ಎಂಥಾ ಜೀವದ ಬ್ಯಾಟೀ ಹಾಡೇ ಹಗಲ”- ಅನ್ನುತ್ತಾಳೆ. ಕೊನೆಗೆ, ಭೂಮಿ ತಾಯಿಯ ಸಂಕಟಕ್ಕೆ ಬೇಂದ್ರೆ ದನಿ ಕೊಡುತ್ತಾರೆ; “ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾಳೋ” ಭೂಮಿ ತಾಯಿ ಒಡವೆ ಅಲ್ಲ. ವಸ್ತು ಅಲ್ಲ. ಉಸಿರು ಇರುವ ಒಡಲು. ನೆನಪಿರಲಿ.
ದೇವನೂರ ಮಹಾದೇವ

Thursday, 25 June 2020

ಮೀಸಲಾತಿಯ ಹರಿಕಾರ ಶಾಹು ಮಹಾರಾಜ …
ಚತ್ರಪತಿ ಶಾಹು ಮಹಾರಾಜ ಹುಟ್ಟಿದ್ದು ಜೂನ್ 26 1874 ರಂದು ಶಾಹುರವರ ಮೊದಲ ಹೆಸರು ಯಶವಂತರಾವ್ ಘಟ್ಲೆ ಅವರ ತಂದೆಯ ಹೆಸರು ಜಯಸಿಂಹರಾವ್ ಘಟ್ಲೆ ತಾಯಿ ರಾಧಾಬಾಯಿ ಇವರು ಮೂಲತಃ ಕೊಲ್ಲಾಪುರದವರು. ರಾಣಿ ಆನಂಧಿಬಾಯಿಯವರು ಮಾರ್ಚ್ 11  1884 ರಂದು ಶಾಹುರನ್ನು ದತ್ತು ತೆಗೆದುಕೊಂಡರು.
ಶಾಹುರವರಿಗೆ 1894ರಂದು ಮಹಾರಾಜರಾಗಿ ಪಟ್ಟಾಭಿಷೇಕವಾಗುತ್ತದೆ. ಕ್ರಿ.ಶ 1900ರಲ್ಲಿ ಒಂದು ಘಟನೆ ನಡಿಯುತ್ತದೆ. ರಾಜನಾದವನು ಗಂಗಾ ಘಾಟ್ ಎಂಬಲ್ಲಿ ಸ್ನಾನ ಮಾಡಬೇಕಾಗಿರುತ್ತದೆ. ಆ ಸಂದರ್ಭದಲ್ಲಿ ರಾಜನಿಗೆ ಬ್ರಾಹ್ಮಣರು ಮಂತ್ರಗಳನ್ನು ಪಟಿಸಬೇಕಾಗಿರುತ್ತದೆ. ಆದರೆ ಬ್ರಾಹ್ಮಣರು ರಾಜನಿಗೆ ಪಟಿಸಬೇಕಾದ  ಮಂತ್ರಗಳನ್ನು ಹೇಳುವುದಿಲ್ಲ ಬದಲಾಗಿ ಶೂದ್ರರ ಮಂತ್ರಗಳನ್ನು ಹೆಳುತ್ತಾರೆ. ಇದನ್ನರಿತ ರಾಜರ  ಆಪ್ತರೊಬ್ಬರು ರಾಜರಿಗೆ ಈ ವಿಚಾರವನ್ನು ತಿಳಿಸುತ್ತಾರ. ಕೂಡಲೇ ಶಾಹು ಮಹಾರಾಜರು ಪುರೋಹಿತರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಪುರೋಹಿತರು ಹೇಳುತ್ತಾರೆ ನೀವು ಶೂದ್ರರಾಗಿರುವುದರಿಂದ ಶೂದ್ರ ಮಂತ್ರಗಳನ್ನೆ ಹೇಳಬೇಕಾಗುತ್ತದೆ. ಎಂದು ಬಹಳ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾರೆ. ಆಗ ಶಾಹು ಮಹಾರಾಜರು ಒಬ್ಬ ಮಹಾರಾಜನಾಗಿರುವ ನನಗೆ ಬ್ರಾಹ್ಮಣರಿಂದ ಶೋಷಣೆಯಾಗುತಿದೆ ಇನ್ನು ಸಾಮಾನ್ಯ ಜನರಿಗೆ ಇವರಿಂದ  ಇನ್ನೆಷ್ಟು ಶೋಷಣೆಯಾಗುತ್ತಿರ ಬಹುದು ಎಂದು ಮನದಲ್ಲೇ ಮರುಕ ಪಡುತ್ತಾರೆ.
ಬ್ರಾಹ್ಮಣಶಾಹಿಗಳಿಂದ  ಅಪಮಾನ, ಅವಮಾನಗಳಿಂದ ತುತ್ತಾದ ದಲಿತರು, ಶೋಷಿತರು ಹಾಗೂ ಸಾಮಾನ್ಯ ಜನರಿಗೆ ಸಮಾನತೆ ದೊರೆಕಿಸಿಕೊಡುವ ನಿಟ್ಟಿನಲ್ಲಿ ಯೋಚನೆ ಮಾಡುತಿರುತ್ತಾರೆ.  ಅದೇ ಸಮಯದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಶಾಹುಮಹಾರಾಜರು ಲಂಡನ್ನಗೆ ಹೋಗುತ್ತಾರೆ  ಅಲ್ಲಿ ತಾವು ಅನುಭವಿಸಿದ ಕೆಲವು ಘಟನೆಗಳು ನೆನಪಿಗೆ ಬರುತ್ತವೆ. ಅದಕ್ಕೆ ಅವರು ಒಂದು ಮಹತ್ತರವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದೇನೆಂದರೆ ಶೂದ್ರರಿಗೆ  50% ಮೀಸಲಾತಿ  ಕೊಡಬೇಕೆಂದು ಭಾರತದ  ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯನ್ನು ಆರಂಭಿಸಿದ ಕೀರ್ತಿ ಛತ್ರಪತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ.  ಶಾಹು ಮಹಾರಾಜರ ಮೀಸಲಾತಿಯ ವಿಷಯವನ್ನು ಕೇಳಿದ ಬ್ರಾಹ್ಮಣಶಾಹಿಗಳಿಗೆ ಒಂದುರೀತಿಯಲ್ಲಿ ನಡುಕ ಉಂಟಾಗುತ್ತದೆ. ಶಾಹು ಮಹಾರಾಜರ ಮೀಸಲಾತಿ ಯೋಜನೆಯನ್ನು ಬಾಲಗಂಗಾಧರ ತಿಲಕರು ಒಪ್ಪುವುದಿಲ್ಲ.  ಬ್ರಾಹ್ಮಣಶಾಹಿಗಳಂತೂ ಸಂಪೂರ್ಣವಾಗಿ ವಿರೋಧಿಸುತ್ತಾರೆ.  ಮಹಾ ರಾಜರ ಮೇಲೆ ಹಲ್ಲೆ ಮಾಡುತ್ತಾರೆ ಒಂದು ದಿನ ಶಾಹು ಮಹಾರಾಜರು ಪ್ರಯಾಣಿಸುತಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆ ಕೊಲೆ ಪ್ರಯತ್ನ ವಿಫಲವಾಗುತ್ತದೆ.
ಇಲ್ಲಿಗೆ ಮೀಸಲಾತಿ ಪದ್ದತಿಗೆ ನೂರಕ್ಕಿಂತಲೂ ಅಧಿಕ ವರ್ಷದ ಹೆಜ್ಜೆ ಗುರುತುಗಳಿವೆ. ಇನ್ನು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿರುವ ದಲಿತರು, ಅಸ್ಪ್ರೃಶ್ಯರು, ಬಡವರು ಹಿಂದುಳಿದವರು ಎಲ್ಲರೂ ಆರ್ಥಿಕವಾಗಿ, ಸಾಮಾಜಿಕ , ರಾಜಕೀಯದಲ್ಲಿ ಎಲ್ಲರೂ ಸಮಾನತೆ ಸಾಧಿಸುವ ವರೆಗೂ ಮೀಸಲಾತಿ ಪದ್ಧತಿ ಮುಂದುವರೆಯ ಬೇಕು. ಶಾಹು ಮಹಾರಾಜ ಕನಸು, ಡಾ.ಬಿಆರ್ ಅಂಬೇಡ್ಕರ್ ರವರ ಕನಸು ಜ್ಯೋತಿ ಬಾ ಫುಲೆ ಸವಿತ್ರಿ ಬಾ ಫುಲೆ ಇನ್ನು ಮುಂತಾ ಬಹುಜನ ನಾಯಕರ ಕನಸು ನನಸು ಮಾಡುವುದು  ನಮ್ಮೆಲ್ಲರ ಕರ್ತವ್ಯವಾಗಿದೆ.                                                             
           
                         ಮಾಳಿಂಗರಾಯ.ಕೆಂಭಾವಿ

ರೈತರ ಆತ್ಮಹತ್ಯೆಗೆ ಕೊನೆಯೆಂದು..?

  ರೈತರ ಆತ್ಮಹತ್ಯೆಗೆ ಕೊನೆಯೆಂದು..? ಮಾಡಿಲ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ರೈತರನ್ನು ನಾವು ನೋಡಿದ್ದೇವೆ ಇದು ಪ್ರಬುತ್ವಕ್ಕೆ ನಾಚಿಕೆಗೇಡಿನ ಸ...