ಮಹಿಳಾ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯವಿರಲಿ


ಅನಾದಿ ಕಾಲದಿಂದಲೂ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ನೊಡಲಾಗುತ್ತಿದೆ. ಪುರುಷಾಧಿಪತ್ಯದಿಂದ ಕೂಡಿರುವ ನಮ್ಮ ದೇಶದಲ್ಲಿ ಮಹಿಳೆಯರನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದೆ ತಳ್ಳಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ ಬಂದು 76 ವರ್ಷವಾದರೂ ಮಹಿಳಾ ಸ್ವಾತಂತ್ರ ಗೌಣವಾಗಿದೆ. ಮಹಿಳೆಯರು ರಾಜಕೀಯ ಮತ್ತು ಸಾಮಾಜಿಕವಾಗಿ ಮುಂದುವರೆದಾಗ ಮಾತ್ರ ದೇಶದಲ್ಲಿ ಲಿಂಗ ಸಾಮಾನತೆ ಕಾಣಲು ಸಾಧ್ಯವಾಗುತ್ತದೆ. ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಪಾಲು ಮಹಿಳೆಯರದು, ಹಾಗಿದ್ದ ಮೇಲೆ ರಾಜಕೀಯದಲ್ಲಿ ಅರ್ಧದಷ್ಟು ಪಾಲು ಮಹಿಳೆಯರಿಗೆ ಮೀಸಲಾಆಗಿರಬೇಕಿತ್ತು, ಆದರೆ ಇಂದಿನ ರಾಜಕೀಯವನ್ನು ಗಮನಿಸಿದರೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಹಿಳೆಯರು ಕಾಣಿಸಿಕೊಳ್ಳುವುದು ಬೇಸರದ ಸಂಗತಿ.

ಪ್ರಸ್ತುತ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆಗೊಳಿಸಿದ್ದು, ಆ ಮೂಸೂದೆ ಜಾರಿಯಾದ ಸಮಯ ಮತ್ತು ಅದರಲ್ಲಿನ ಕೆಲವು ನಿರ್ಭಂಧಗಳನ್ನು ನೋಡಿದರೆ ಇದು ಮುಂಬರುವ ಲೋಕಸಭೆ ಚುನಾವಣೆಯ ಅಸ್ತ್ರವೆಂದು ಭಾಸವಾಗುತ್ತದೆ. ಅಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧೀಯವರು ಸಂವಿಧಾನಕ್ಕೆ 72 ಮತ್ತು 73 ನೇ ತಿದ್ದುಪಡಿ ತಂದು ಮಹಿಳಾ ಮೀಸಲಾತಿ ಜಾರಿಗೊಳಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನದಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿ ದೊರೆಯಿತು. ಇದೇ ಮಾದರಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ದೊರೆಯಬೇಕೆನ್ನುವ ಕೂಗು ಎದ್ದ ಕಾರಣ ಮಾಜಿ ಪ್ರಧಾನಿಗಳಾದ ವಾಜಪೇಯಿ, ಎಚ್‌.ಡಿ.ದೇವೇಗೌಡ, ಮನಮೋಹನ್‌ ಸಿಂಗ್‌ ಅವರ ಅಧಿಕಾರವಧಿಯಲ್ಲಿ ಸಾಕಷ್ಟು ಪ್ರಯತ್ನಗಳಾಗಿದ್ದು, ಈ ಬಾರಿ ನರೇಂದ್ರ ಮೋದಿಯವವರ ನೇತೃತ್ವದಲ್ಲಿ ಮಸೂದೆ ಮಂಡನೆಯಾದದ್ದು ಸ್ವಾಗತಾರ್ಹವಾದರೂ, ಅದರ ಹಿಂದಿನ ರಾಜಕೀಯ ದುರುದ್ದೇಶವನ್ನು ದೇಶದ ಜನರು ಒಪ್ಪಲಾರರು. 


ಮೀಸಲಾತಿ ಮಸೂದೆಯಲ್ಲಿ ಏನಿದೆ : ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವುದು. ಮಹಿಳಾ ಮೀಸಲಾತಿ ಮಸೂದೆ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಿ ಏನೋ ರೂಪುಗೊಳ್ಳುತ್ತೆ ಆದರೆ ಅದರ ಸಂಪೂರ್ಣ ಅನುಷ್ಠಾನಕ್ಕೆ ಬರುವುದು ಜನಗಣತಿಯಾಗಿ ಕ್ಷೇತ್ರಗಳ ಪುನರ್‍‌ ವಿಂಗಡನೆಯಾದಾಗ ಮಾತ್ರ ಉಪಯೋಗಕ್ಕೆ ಬರುವ ಹಾಗೆ ಮಸೂದೆಯನ್ನು ರೂಪಿಸಲಾಗಿದೆ. ಜನಗಣತಿ ಮತ್ತು ಕ್ಷೇತ್ರ ಮರು ವಿಂಗಡನೆಯಾಗಲು ಇನ್ನು ಹಲವು ವರ್ಷಗಳೇ ಬೇಕು ಅಷ್ಟರಲ್ಲಿ 2024ರ ಲೋಕ ಸಭೆ ಚುನಾವಣೆ ಮತ್ತು ಅನೇಕ ರಾಜ್ಯಗಳ ವಿಧಾನ ಸಭೆ ಚುನಾವಣೆ ಮತ್ತು ಸ್ಥಳೀಯ ಚುನಾವಣೆಗಳು ಮುಗಿದು ಹೋಗಿ ಅಲ್ಲಿ ಮಹಿಳೆಯರ ಅವಕಾಶ ಕೈ ತಪ್ಪಿಹೋಗುತ್ತದೆ. ಇದೇ ರೀತಿ ಆಗಲಿ ಎಂದು ನಿರ್ಧಿಷ್ಟವಾಗಿ ಮಸೂದೆಯನ್ನು ರೂಪಿಸಲಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ಮಹಿಳೆಯರ ಬಾಯಿಗೆ ತುಪ್ಪಸವರುವ ಕೆಲಸ ಮಾಡಿದೆ. ಮೋದಿಯವರು ಕಳೆದ ಬಾರಿ ಪ್ರಧಾನಿಯಾದಗಲೇ ಈ ಮೀಸಲಾತಿಯನ್ನು ಜಾರಿಗೊಳಿಸಬಹುದಿತ್ತು. ಆದರೆ ಅವಾಗ ಚುನಾವಣೆಯಲ್ಲಿ ಗೆಲ್ಲಲು ಬೇರೆ ಅಜೇಂಡಾಗಳಿದ್ದು, ಈ ಬಾರಿ ಮಹಿಳಾ ಮೀಸಲಾತಿಯನ್ನು ಚುನಾವಣೆಯಲ್ಲಿ ಗೆಲ್ಲುವ ಅಸ್ತ್ರವನ್ನಾಗಿ ಉಪಯೋಗಿಸುತ್ತಿದ್ದಾರೆ. 


ಒಳ ಮೀಸಲಾತಿ ಅವಶ್ಯಕ: ಕೇವಲ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಿದರೆ ಸಾಲದು, ಅದರ ಜೊತೆಗೆ ಹಿಂದುಳಿದ ವರ್ಗ, ಪ.ಜಾ, ಪ.ಪ, ಅಲ್ಪ ಸಂಖ್ಯಾತರಿಗೆ ಒಳ ಮೀಸಲಾತಿ ಕಲ್ಪಿಸಿದರೆ ಮಾತ್ರ ಮೀಸಲಾತಿಯ ಉದ್ದೇಶ ಈಡೆರುತ್ತದೆ. ಪ್ರಸ್ತುತ ಜಾರಿಗೊಳಿಸಿರುವ ಮೀಸಲಾತಿಯು ಪ್ರಭಾವಿ ಜಾತಿಗಳಿಗೆ ಉಪಯೋಗವಾಗಿ ಇನ್ನುಳಿದ ದುರ್ಬಲ ಸಮುದಾಯಗಳು ಮೀಸಲಾತಿಯಿಂದ ವಂಚಿತರಾಗುತ್ತಾರೆ. ಮೀಸಲಾತಿಯನ್ನು ಎಲ್ಲಾ ಸಮುದಾಯದ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಸಿಗುವ ಹಾಗೆ ರೂಪಿಸಬೇಕಿತ್ತು.. ಆದರೆ ಅದೇ ಪುರುಷ ಪ್ರಧಾನ ಮೌಲ್ಯವುಳ್ಳ, ಬ್ರಾಹ್ಮಣ ಶಾಹಿಗಳು ಅಷ್ಟು ಸುಲಭವಾಗಿ ಎಲ್ಲರಿಗೂ ನ್ಯಾಯ ಸಿಗುವಂತೆ ರೂಪಿಸಲಾರರು, ಮೀಸಲಾತಿ ಪರಿಕಲ್ಪನೆ ಹುಟ್ಟಿಕೊಂಡಿದ್ದು, ಕೇವಲ ರಾಜಕೀಯದಲ್ಲಿ ಭಾಗವಹಿಸಲು ಮಾತ್ರವಲ್ಲ ಅದರಿಂದ ಸಾಮಾಜಿಕ ನ್ಯಾಯ ದೊರೆಯಬೇಕು ಎನ್ನವ ಸದುದ್ದೇಶದಿಂದ. ನಮ್ಮ ದೇಶದ ರಾಜಕೀಯ, ನ್ಯಾಯಾಂಗ ಮತ್ತಯ ಆಡಳಿತಾಂಗಗಳಲ್ಲಿ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯ ಕಡಿಮೆ ಇರುವುದರಿಂದ ಮೀಸಲಾತಿ ಮಹಿಳಾ ಮೀಸಲಾತಿಯು ಹಿಂದುಳಿದ, ದಲಿತ ಸಮುದಾಯಗಳ ಪ್ರಾತಿನಿಧ್ಯಕ್ಕೆ ಅವಕಾಶವಾಗುವಂತೆ ರೂಪಿಸುವುದು ಅವಶ್ಯವಾಗಿದೆ.   

ಮಾಳಿಂಗರಾಯ ಕೆಂಭಾವಿ 


Comments

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...