ಹುಟ್ಟು ಮತ್ತು ಸಾವುಗಳ ನಡುವೆ...
ಈ ಬದುಕು ಕಾಲಕ್ಕೆ ಸಂಬಂಧಿಸಿದ್ದು. ಕಾಲ ಕೇವಲ ಗಡಿಯಾರವನ್ನವಲಂಬಿಸಿಲ್ಲ; ನಾಡಿ ಬಡಿತವನ್ನು, ಬದುಕುವ ಆಶೆ ಮತ್ತು ಸಾವಿನ ಸಾಧ್ಯತೆಯನ್ನು ಅವಲಂಬಿಸಿದ್ದು...
ಪಿ.ಲಂಕೇಶ್ |
ಕಾಲದ ಪ್ರಜ್ಞೆ ನೈತಿಕ ಮತ್ತು ಸಾಮಾಜಿಕವಾದದ್ದು. ನಾನು ತುಂಬ ಚಿಕ್ಕವನಾಗಿದ್ದಾಗ ಕಂಡುಕೊಂಡ ಸತ್ಯ ಇದು... ಕಾಲದ ಪರಿವೆ ಕೇವಲ ಸಾಮಾಜಿಕವಲ್ಲ, ಅದು ಒಬ್ಬ ವ್ಯಕ್ತಿ ಮತ್ತು ಗುಂಪು ತನ್ನಲ್ಲಿ ಇರುವ ಭೂತಕಾಲದ ನೆನಪುಗಳನ್ನು, ಮೌಲ್ಯಗಳನ್ನು ವರ್ತಮಾನಕ್ಕೆ ಹೊಂದಿಸಿ ಭವಿಷ್ಯ ಕಾಲದತ್ತ ಅಡಿ ಇಡುವ ರೀತಿ ಕೂಡ. ಭಾರತೀಯ ಈ ದೃಷ್ಟಿಯಲ್ಲಿ ಕೊಂಚ ದುರ್ಬಲ...
ಕಾಲದ ಆಟ ವ್ಯಕ್ತಿಯಿಂದಲೇ ಶುರುವಾಗುತ್ತದೆ. ಆತ ತನಗೆ, ತನ್ನವರಿಗೆ ಎಂದು ರೂಪಿಸಿಕೊಳ್ಳುವ ಆಶಯಗಳೆಲ್ಲ ಆತನ ಒಳ ಮಾರ್ದವಗಳನ್ನು, ಆತನ ವ್ಯಕ್ತಿತ್ವದ ಸಾಧ್ಯತೆಗಳನ್ನು ಅವಲಂಬಿಸಿದೆ. ನಾನು ನಾಳೆಯ ಹೊತ್ತಿಗೆ, ಇಷ್ಟು ಗಂಟೆಗೆ ಮಾಡಬೇಕಾದ್ದನ್ನು ಮಾಡದಿದ್ದರೆ ಅದು ಆತ್ಮವಂಚನೆ. ತನ್ನ ವೇಳೆಗೆ ತಾನು ಮಾಡಿಕೊಂಡ ಮೋಸ. ಈ ವಂಚನೆಯಿಂದಲೇ ಸಾಮೂಹಿಕ ವೇಳೆಯ ಬಗ್ಗೆ ನಿರ್ಲಕ್ಷ್ಯ ಶುರುವಾಗುತ್ತದೆ. ವರ್ತಮಾನದ ಕ್ರಿಯೆ ಮಂದವಾಗುತ್ತ ಹೋಗುತ್ತದೆ. ಕಾಲ, ದೇಶಕ್ಕೆ ವ್ಯಕ್ತಿಯ ಹೊಣೆ ತನ್ನ ಮೊನಚು ಕಳೆದುಕೊಳ್ಳುತ್ತದೆ.
ಈ ಜಗತ್ತಿನಲ್ಲಿ ಏನಾದರೂ ಒಳ್ಳೆಯದು, ಮೌಲ್ಯ ಅನ್ನಿಸಿಕೊಳ್ಳುವಂಥದು ಉಳಿದಿದ್ದರೆ ಅದು ಸಮಯಕ್ಕೆ ಬದ್ಧವಾಗಿಯೇ ಉಳಿದಿದೆ; ಸೃಷ್ಟಿಸಿದ ಮನುಷ್ಯನ ಹುಟ್ಟು ಮತ್ತು ಸಾವಿನ ನಡುವಿನ ಮೈಲಿಗಲ್ಲಾಗಿ ರೂಪುಗೊಂಡಿದೆ. ಆದ್ದರಿಂದ ಹೊರಡಬೇಕಾದದ್ದು ಕಾಲಕ್ಕೆ ಬದ್ಧರಾಗಿಯೇ; ಆದ್ದರಿಂದ ನಾನು ಯಾವನೇ ಬುದ್ಧಿವಂತನ ಗಾಢವಿಚಾರಗಳನ್ನು ಅವುಗಳ ತೂಕಕ್ಕಾಗಿ ಗೌರವಿಸುವುದಿಲ್ಲ; ಕಾಲ, ದೇಶದಲ್ಲಿಟ್ಟು ನೋಡಿ ಮಾಪನ ಮಾಡುತ್ತೇನೆ. ಹಾಗೆಯೇ ಅದ್ಭುತ 'ಐಡಿಯಾ' ಉದ್ದೇಶಗಳನ್ನಿಟ್ಟುಕೊಂಡ ಅಶಿಸ್ತಿನ ಜನರ ಐಡಿಯಾಗಳೆಲ್ಲ ವ್ಯರ್ಥವಾದವು. ಸಹಜ, ಸಾಮಾನ್ಯ ಉದ್ದೇಶಗಳಿಂದ ಹೊರಟ ಶಿಸ್ತಿನ ಹೊಣೆಯರಿತ ಜನರ ಚಟುವಟಿಕೆಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ. ಯಾಕೆಂದರೆ ನಿಯಮಬದ್ಧವಾಗಿ ಜನನ ಮರಣದ ನಡುವಿನ ಕಾಲದ ಮೂರ್ತ, ಅಮೂರ್ತ ರೂಪಗಳನ್ನೂ, ಸಾಧ್ಯತೆಗಳನ್ನೂ ಮನುಷ್ಯನ ಬದುಕಿನ ವಿಪರ್ಯಾಸ, ದುರಂತಗಳನ್ನು ತಿಳಿದ ಮನುಷ್ಯರ ಶಿಸ್ತಿನ ಪುಟ್ಟ ಕೆಲಸ ಅರ್ಥವುಳ್ಳ ಬದುಕನ್ನು ರೂಪಿಸಲು ನೆರವಾಗುತ್ತದೆ.
ಈ ವೇಳೆಯ ಬಗೆಗಿನ ಕಾಳಜಿ ನಮ್ಮ ಆರೋಗ್ಯ, ಪರಿಸರದ ನೈರ್ಮಲ್ಯ, ನಮ್ಮ ಜನರ ಸಹಬಾಳ್ವೆ, ಎಲ್ಲರೂ ಸೇರಿ ಮಾಡಬಹುದಾದ ಕೆಲಸಗಳು, ಶಿಕ್ಷಣ, ವಿಜ್ಞಾನ, ರಾಜಕೀಯ, ಸಂಸ್ಕೃತಿ- ಎಲ್ಲವನ್ನೂ ಒಳಗೊಳ್ಳುತ್ತದೆ ಎಂದು ನಾನು ಹೇಳುವಾಗ ಉತ್ಪ್ರೇಕ್ಷಿಸುತ್ತಿಲ್ಲ.
ರಕ್ತದೊತ್ತಡ, ಹೃದಯಾಘಾತಗಳು ವ್ಯಕ್ತಿಯನ್ನೊಳಗೊಂಡು ಇಡೀ ಸಮಾಜಕ್ಕೆ ತಗುಲುವುದು ಇಲ್ಲಿ ಯಾವ ಕೆಲಸಕ್ಕೂ ಕಾಲ, ದೇಶದ ಪ್ರಜ್ಞೆ ಇಲ್ಲದಿರುವುದರಿಂದ."
-ಪಿ. ಲಂಕೇಶ್
ಕೃಪೆ: ಮರೆಯುವ ಮುನ್ನ, ಸಂಗ್ರಹ-1, ಪುಟ: 73-75, 2009
Nice 🙂
ReplyDelete