ಅಂಬಾನಿ ಅದಾನೀಸ್ ಆಸ್ಥಾನದಲ್ಲಿ ಪ್ರಧಾನಿಯೇ ನರ್ತಕಿಯಾದರೆ?!
ನೆನಪಿದೆಯಾ? ಕಳೆದ ಲೋಕಸಭಾ ಚುನಾವಣೆಗೆ ಮುನ್ನಾ ಮೋದಿಯವರ ನಾಲಿಗೆ ನುಡಿದ ಒಂದು ಮಾತು- “ನಾವು ಅಧಿಕಾರಕ್ಕೆ ಬಂದರೆ ರೈತರ ಆತ್ಮಹತ್ಯೆಯನ್ನು ಶೂನ್ಯ ಮಾಡುತ್ತೇವೆ, ಜೀರೋ ಮಾಡುತ್ತೇವೆ.” – ಈ ಮಾತನ್ನು ಬಿಜೆಪಿಯವರು ದೇಶದ ಉದ್ದಗಲಕ್ಕೂ ಜಪಿಸಿದರು. ಮೋಡಿ ಹಾಕಿದರು. ಮತದಾರರು ಮರುಳಾದರು. ಆಯ್ತು, ಬಿಜೆಪಿ ಅಧಿಕಾರಕ್ಕೂ ಬಂತು. ಮೋದಿಯವರು ಪ್ರಧಾನಿಯೂ ಆದರು. ರೈತರ ಆತ್ಮಹತ್ಯೆಯನ್ನು ಶೂನ್ಯ ಮಾಡುತ್ತೇವೆಂದ ಮೋದಿಯ ಬಿಜೆಪಿ ಸರ್ಕಾರ ಮಾಡಿದ್ದೇನು? ಭೂ ಸ್ವಾಧೀನ ಸುಗ್ರೀವಾಜ್ಞೆ ತಂದಿತು! ರೈತರನ್ನು ಭೂಮಿಯಿಂದ ಕಿತ್ತೆಸೆದು ಅವರನ್ನು ಭೂಹೀನರನ್ನಾಗಿಸಿ ರೈತರೇ ಶೂನ್ಯವಾಗುವÀ ಕಾಯಿದೆ – ಈ ಭೂಸ್ವಾಧೀನ ಸುಗ್ರೀವಾಜ್ಞೆ ಕಾಯಿದೆ!
ಸ್ವಲ್ಪ ಯೋಚನೆ ಮಾಡಿ- ಭೂಮಿ ಇಟ್ಟುಕೊಂಡವನು ಆತ್ಮಹತ್ಯೆ ಮಾಡಿಕೊಂಡರೆ ತಾನೇ ಅದು ರೈತನ ಆತ್ಮಹತ್ಯೆ? ಭೂಮಿಗೆ ಅಂಟಿಕೊಂಡು ಜೀವಿಸುವ ರೈತರನ್ನು ಉಳಿಸಿ ಅವರ ಆತ್ಮಹತ್ಯೆಯನ್ನು ಶೂನ್ಯ ಮಾಡುವ ಬದಲು ಭೂಮಿಯಿಂದ ರೈತರನ್ನು ಕ್ರೂರವಾಗಿ ಕಿತ್ತೆಸೆÀದು ರೈತರನ್ನೇ ಶೂನ್ಯ ಮಾಡುವುದೇ ಈ ಬಿಜೆಪಿ ಸರ್ಕಾರದ ಭೂ ಸ್ವಾಧೀನ ಮಸೂದೆಯೆಂಬ ಈ ಜೇಡರ ಬಲೆಯ ಕಾರ್ಯಕ್ರಮ.
ಭಾರತದ ಭೂಮಿಯ ಜೀವಂತಿಕೆಯನ್ನು ಅರಿತವರು, ಇಂಥ ಭೂ ಸ್ವಾಧೀನ ಕಾನೂನು ಮಾಡಲಾರರು. ಭಾರತದಲ್ಲಿ ಭೂಮಿ ಅಂದರೆ ಒಂದು ವೃಕ್ಷ ಇದ್ದಂತೆ. ಆ ವೃಕ್ಷ ಆಧರಿಸಿ ಪಶು, ಪಕ್ಷಿ, ಜಾನುವಾರುಗಳು ತಮ್ಮ ಬದುಕು ಕಟ್ಟಿಕೊಳ್ಳುವಂತೆ- ಒಂದು ಎಕರೆ ಭೂಮಿಯಲ್ಲೇ ಆ ಭೂಮಿಯ ರೈತನಷ್ಟೇ ಅಲ್ಲದೆ ಸುತ್ತಮುತ್ತಲಿನ ಹತ್ತಾರು ಕುಟುಂಬಗಳು ತಂತಮ್ಮ ಗಂಜಿ ಹುಟ್ಟಿಸಿ ಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ! ರೈತ ತನ್ನ ಭೂಮಿ ಜತೆ ನೇರವಾಗಿ ಸಂಬಂಧಪಟ್ಟವನಾಗಿ ಬದುಕು ಕಟ್ಟಿಕೊಂಡರೆ ಸುತ್ತಮುತ್ತಲಿನ ಅನೇಕ ಜೀವಗಳು ಪರೋಕ್ಷವಾಗಿ ಆ ಭೂಮಿಗೆ ನಂಟುಳ್ಳವರಾಗಿರುತ್ತಾರೆ. ಇದು ಭಾರತದ ಕೃಷಿ ಬದುಕು. ಇದು ಭಾರತದ ಭೂಮಿಯ ಲಕ್ಷಣ. ಹಾಗೇ ಜೀವನ ವೈಶಿಷ್ಟತೆ. ಇದೇ ಹಳ್ಳಿಗಾಡಿನ ಸಂಸ್ಕøತಿ ಕೂಡ. ಇದನ್ನು ಅರಿಯದವರು ದೆಹಲಿಯಲ್ಲಿ ಕೂತುಕೊಂಡು ಈ ಭೂಸ್ವಾಧೀನ ಕಾಯ್ದೆ ತಂದಿದ್ದಾರೆ.
ಆಗ ಬ್ರಿಟಿಷರಿಗೆ ಭಾರತ ಗುಲಾಮ ಆಗಿತ್ತು. ಅವರೂ ಈ ಹಿಂದೆ ಇಂಥದೇ ಭೂ ಸ್ವಾಧೀನ ಕಾಯ್ದೆ ತಂದಿದ್ದರು. ಅದನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಬ್ರಿಟಿಷ್ ಭೂ ಸ್ವಾಧೀನ ಕಾಯ್ದೆಗಿಂತಲೂ ಅತ್ತತ್ತ ಅನ್ನುವಂತೆ, ಜನರನ್ನು ಜಾನುವಾರುಗಳು ಎಂಬಂತೆ ಕಾಣುವ ಈ ಭೂಸ್ವಾಧೀನ ಕಾಯ್ದೆಯನ್ನು ನಮ್ಮವರೇ ತಂದರೆ ಇದನ್ನು ಹೇಗೆ ಅರ್ಥ ಮಾಡಿಕೊಳ್ಳೋಣ? ನಮ್ಮವರಿಗೆ ನಾವೇ ಗುಲಾಮರೇ? ಅರ್ಥವಾಗುತ್ತಿಲ್ಲ. ಒಂದು ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಆ ಉದ್ದೇಶಕ್ಕೆ ಬಳಸಲ್ಪಡದಿದ್ದರೆ- ಅದನ್ನು ರೈತರಿಗೆ ಹಿಂತಿರುಗಿಸುವುದಿಲ್ಲವಂತೆ. ಇದು ಪರಮ ವಂಚನೆ ಅಲ್ಲವೆ? ಇದರೊಳಗೆ ಲ್ಯಾಂಡ್ ಮಾಫಿಯಾ ವಹಿವಾಟು ಅಡಗಿ ಕೂತಿದೆ. ಇದು ದ್ರೋಹವಲ್ಲವೆ?
ಹಿಂದೆ ರಾಜರುಗಳು ಇದ್ದರು. ಆ ರಾಜರ ಇಚ್ಛೆಗೆ ತಕ್ಕಂತೆ ವೇಷಭೂಷಣ ಹಾಕಿ ನರ್ತಿಸುವ ನರ್ತಕಿಯರೂ ಇದ್ದರು. ಈಗ ಭಾರತದಲ್ಲಿ ಅಂಬಾನಿ, ಅದಾನಿ ಇತ್ಯಾದಿಗಳೇ ರಾಜರುಗಳು ಆಗಿಬಿಟ್ಟಿದ್ದಾರೆ. ನಮ್ಮ ಪ್ರಧಾನಿ, ಮಂತ್ರಿ ಮಹೋದಯರು ಬಂಡವಾಳಗಾರರ ಆಸ್ಥಾನದಲ್ಲಿ ತರಾವರಿ ವೇಷ ಹಾಕಿಕೊಂಡು ಕುಣಿಯುವ ನರ್ತಕಿಯರಾಗಿ ಬಿಟ್ಟಿದ್ದಾರೆ. ಬಂಡವಾಳಗಾರರು ಕಾಲ್ಸನ್ನೆಯಲ್ಲಿ ತೋರಿಸಿದ್ದನ್ನು ನಮ್ಮ ಮಂತ್ರಿ ಮಹೋದಯರುಗಳು ಕೈಮುಗಿದು ಕಾನೂನು ಮಾಡುತ್ತಿದ್ದಾರೆ. ರಾಜ್ಯಗಳ ಮಂತ್ರಿ ಮಹೋದಯರುಗಳು ತಮ್ಮ ಚಾನ್ಸ್‍ಗಾಗಿ ಹಲ್ಲುಗಿಂಚುತ್ತಿದ್ದಾರೆ. ಇದು ಭಾರತದಲ್ಲಿ ಬಂಡವಾಳ ಮತ್ತು ರಾಜಕಾರಣದ ಜಂಟಿ ಘೋರ ದುರಂತ ನಾಟಕ. ಈ ದುರಂತ ನಾಟಕದ ಕೊನೆ ಎಲ್ಲಿ ಮುಟ್ಟಬಹುದು? ನಮ್ಮ ಕಣ್ಣೆದುರಿಗೆ ಕಾಣುತ್ತಿರುವುದನ್ನೇ ನೋಡಿ ಹೇಳುವುದಾದರೆ, ಈ ಕ್ಯಾನ್ಸರ್ ಅಭಿವೃದ್ಧಿಯ ಲಕ್ಷಣವು ಬಾಂಬೆಯ ಕೊಳೆಗೇರಿಯೊಂದರ ನಡುವೆ ಆಕಾಶಕ್ಕೆ ಚಾಚುತ್ತಾ ನಿಂತಿರುವ ಅಂಬಾನಿಯ ಸಂಪತ್ತಿನ ದೌಲತ್ತಿನಲ್ಲಿ ಈಗಾಗಲೇ ಕಾಣಿಸಿ ಕೊಂಡಿದೆ. ಅಂಬಾನಿ ನಿವಾಸ ಇರುವ ಈ ಕೊಳೆಗೇರಿ ಬಡಾವಣೆಯ ಸಂಪತ್ತಿನ ಸರಾಸರಿ ಅಂದರೆ, ಜಿಡಿಪಿ ದರ ತೆಗೆದರೆ -ಆಗ ಆ ಕೊಳೆಗೇರಿ ನಿವಾಸಿಗಳೆಲ್ಲರೂ ಲೆಕ್ಕದಲ್ಲಿ ಕೋಟ್ಯಾಧೀಶ್ವರರಾಗಿ ಬಿಡುತ್ತಾರೆ! ಆದರೆ ವಾಸ್ತವದಲ್ಲಿ ಆ ಕೊಳೆಗೇರಿಯ ಮುಕ್ಕಾಲು ಪಾಲು ಜನ ದಿನಕ್ಕೆ ನೂರು ರೂಪಾಯನ್ನೂ ಕಾಣದೇ ಹಸಿದು ಮಲಗಿರಲೂಬಹುದು. ಹೀಗೆ ಸಂಪತ್ತು ಪೈಶಾಚಿಕ ಆಗುವುದನ್ನು ಈಗಲಾದರೂ ಎಚ್ಚೆತ್ತುಕೊಂಡು ತಡೆಯದಿದ್ದರೆ, ಇದು ಇಡೀ ಭಾರತದ ನಾಳಿನ ದೃಶ್ಯಾವಳಿ ಆಗಿಬಿಡಬಹುದು. ಇದು ಕೊನೆಗೆ ಭಾರತವನ್ನು ವೇಶ್ಯಾವಾಟಿಕಾ ಪ್ರವಾಸೋದ್ಯಮ ರಾಷ್ಟ್ರವಾಗಿಸಿ ಹೊಟ್ಟೆ ಯಾಪ್ತಿ ಮಾಡುವಲ್ಲಿಗೆ ತಂದುಬಿಡಬಹುದೇನೋ? ಭಾರತ ಮಾತೆ ಎಂದು ಉಚ್ಚರಿಸುವವರು ಇದನ್ನು ಕಾಣಬೇಕಾಗಿದೆ.
ಜೊತೆಗೆ, ವಿದೇಶಿ ಬಂಡವಾಳಶಾಹಿ ಸ್ವಭಾವವೇ ಬೇರೆ- ಭಾರತದ ಬಂಡವಾಳಶಾಹಿ ಸ್ವಭಾವವೇ ಬೇರೆ. ಭಾರತದ ಬಂಡವಾಳಶಾಹಿ ಬಕಾಸುರನ ಸಂತಾನ. ಸ್ವಾರ್ಥಿ ಹಾಗೂ ನಿರ್ಲಜ್ಜ. ಭಾರತದಲ್ಲಿ ಖಾಸಗಿ ಎಂದರೆ- ಹೆಚ್ಚೂ ಕಮ್ಮಿ ಜಾತಿಯಂತೇ ಆಗಿ ಬಿಡುತ್ತದೆ. ಅದು ನಿರ್ದಯಿ ಕೂಡ. ಇದನ್ನು ನಮ್ಮ ವಿದ್ಯಾವಂತ ನಾಗರಿಕರ ವಾಸಸ್ಥಳಗಳು ಆಯಾಯಾ ಜಾತಿಗೆ ಅನುಗುಣ ಬಡಾವಣೆಗಳಾಗಿ ನಿರ್ಮಾಣವಾಗುತ್ತಿರುವುದನ್ನು ನೋಡಿದರೂ ಕಾಣಬಹುದು.
ಇದರ ನಡುವೆ ಇತ್ತೀಚೆಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ಜೈರಾಂ ರಮೇಶ್ ಹೇಳಿದರು –‘ಎನ್.ಡಿ.ಎ. ಈ ಭೂಸ್ವಾಧೀನ ಕಾಯ್ದೆ ತಂದಿರುವುದು ಕಾಂಗ್ರೆಸ್ ಪುನಶ್ಚೇತನಕ್ಕೆ ಒಂದು ಸದವಕಾಶ’ ಅಂತ. ಈ ಮಾತು ಗಾಯದ ಮೇಲೆ ಎಳೆದ ಬರೆ. ಎನ್.ಡಿ.ಎ. ಸರ್ಕಾರದ ಈ ಭೂಸ್ವಾಧೀನ ಕಾಯಿದೆ ವಿರುದ್ಧದ ಹೋರಾಟವಿದೆಯಲ್ಲ, ಇದು ಪಕ್ಷಾತೀತ ಹೋರಾಟ. ಈ ಹೋರಾಟದ ಮುಂದೆ ಪಕ್ಷಗಳು ಕ್ಷುಲ್ಲಕ. ಉರಿಯುತ್ತಿರುವ ಮನೆಯಲ್ಲಿ ಗಳ ಇರಿಯಬಾರದು. ಬಾಯಿಬಿಟ್ಟರೆ ಮಾತೃಭೂಮಿ, ಮಾತೃಭೂಮಿ ಎನ್ನುವ ಆರ್‍ಎಸ್‍ಎಸ್‍ನವರು – ಅವರಲ್ಲಿ ಎಚ್ಚರ ಇರುವವರು ಇದ್ದಲ್ಲಿ – ಅವರು ಕೂಡ ಮಾಡಬೇಕಾದ ಹೋರಾಟ ಇದು. ಅವರು ಬೆಂಬಲಿಸಿದ ಪ್ರಧಾನಿ ಮೋದಿಯವರು `ಮಾತೃಭೂಮಿಯ ಮಾರಾಟಗಾರ’ ಎಂಬ ಬಿರುದಿಗೆ ಬಾಧ್ಯರಾಗುವುದನ್ನು ತಪ್ಪಿಸುವ ಹೊಣೆಗಾರಿಕೆ ಅವರ ಮೇಲೂ ಇದೆ.
ಇದು ಎಲ್ಲರೂ ಎಚ್ಚರಗೊಳ್ಳಬೇಕಾದ ಕಾಲ. ಅನ್ನ ತಿನ್ನುವರೆಲ್ಲರೂ ಈ ಎನ್‍ಡಿಎ ಭೂಸ್ವಾಧೀನ ಕಾಯ್ದೆಯನ್ನು ಪ್ರತಿಭಟಿಸಬೇಕಾಗಿದೆ.
ನೆನಪಿರಲಿ, ಮಹಾಕವಿ ಬೇಂದ್ರೆಯವರ ಚಿಗರಿಗಂಗಳ ಚೆಲುವಿ ಕವಿತೆಯ ಸಾಲುಗಳು. ತನ್ನ ವಿಧ್ವಂಸಕ ಮಕ್ಕಳಿಂದಲೇ ಧಾಳಿಗೊಳಗಾದ ಭೂಮಿ ತಾಯಿ ಚೀತ್ಕರಿಸುತ್ತಾಳೆ : “ಇದು ಎಂಥಾ ಜೀವದ ಬ್ಯಾಟೀ ಹಾಡೇ ಹಗಲ”- ಅನ್ನುತ್ತಾಳೆ. ಕೊನೆಗೆ, ಭೂಮಿ ತಾಯಿಯ ಸಂಕಟಕ್ಕೆ ಬೇಂದ್ರೆ ದನಿ ಕೊಡುತ್ತಾರೆ; “ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾಳೋ” ಭೂಮಿ ತಾಯಿ ಒಡವೆ ಅಲ್ಲ. ವಸ್ತು ಅಲ್ಲ. ಉಸಿರು ಇರುವ ಒಡಲು. ನೆನಪಿರಲಿ.
ದೇವನೂರ ಮಹಾದೇವ

Comments

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...