ಹೊಳೆ... ಕವನ ಸಂಕಲನ- ಸಂಜೆ ಐದರ ಮಳೆ.
ಹೊಳೆ... ಕವನ ಸಂಕಲನ- ಸಂಜೆ ಐದರ ಮಳೆ.
--------------------------------------------
ನಡುಹಗಲು ಸ್ವಪ್ನಿಸಿದ ಹೊಳೆ
ತಂಪಿನ ಸ್ಯಾಂಪಲ್ಲುಗಳ ತಳ್ಳಿ
ದಡದ ರಂಜದ ಗಿಡದ ನನ್ನ ಕಾಲೆಡೆಯಲ್ಲಿ
ಬಟ್ಟಗಣ್ಣವಳೆ
ಎಳೆಯುತ್ತಿದೆ, ಎದೆಯನಿರ್ಧಾರವನು ಅಳೆಯುತ್ತಿದೆ-
ಬಿಸಿಲ ಧಗೆ ಮೈಲಿಗೆ
ಪರಿಹರಿಸುವಾತುರದ ಬಗೆ
ತೆರೆಯ ಕರೆ ಕೂಗಾಗಿ ಚಾಪಲ್ಯ
ಮಾಗಿ ಅತ್ಯಗತ್ಯತೆ
ಉಟ್ಟಿದ್ದ ಕಳಚಿ
ಧುಮುಕಬೇಕಿನ್ನೇನು... ಆಗ
ಪ್ರತಿಮೆ ನಿಲ್ಲುವ ಮೈ ಬಿಳುಚಿ.
ಇಲ್ಲೆದ್ದು ಮುಳುಗಿ ಮತ್ತೆ ಆಲ್ಲೆದ್ದು
ಹೋಯಿತೋ ಎನುವಲ್ಲಿ ನನ್ನತ್ತಲೇ ಕದ್ದು
ಧಾವಿಸಿದೆ ತೀರಹೊಕ್ಕಳ ಸಾವು
ಹಾವು.
ನೋಡುತ್ತಲಿದ್ದಂತೆ ಆ ಜಂತು ಹೆಸರಿನ ಭೀತಿ
ನೀತಿ ಸಂಸ್ಕಾರ ಆಚಾರ ಜಾತಿ
ಕೊನೆಗೆ ನೀನೇ ಆಗಿ ದಿಟ್ಟಿಸಿರೆ ನಲ್ಲೆ
ಸ್ನಾನ ಸುಖ ಇನ್ನೆಲ್ಲೆ ?
-ಕೆ ಎಸ್ ನಿಸಾರ್ ಅಹಮದ್.
Comments
Post a Comment